ನವದೆಹಲಿ: ಬಹು ನಿರೀಕ್ಷಿತ ಚಿತ್ರ ಬಾಹುಬಲಿ-2 ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿ ಪ್ರೇಕ್ಷಕರು ಮುಗಿಬಿದ್ದು ಚಿತ್ರ ನೋಡುತ್ತಿದ್ದರೆ ಅತ್ತ ವಿದೇಶಗಳಲ್ಲಿ ಮಾತ್ರ ಅಭಿಮಾನಿಗಳು ವಿತರಕರಿಗೆ ಶಾಕ್ ನೀಡಿದ್ದಾರೆ.
ಬಹು ನಿರೀಕ್ಷಿತ ಬಾಹುಬಲಿ-2 ಚಿತ್ರಕ್ಕೆ ಪ್ರೇಕ್ಷಕರ ಕೊರತೆ ಎದುರಾಗಿದ್ದು, ವಿದೇಶಗಳಲ್ಲಿ ಚಿತ್ರದ ಕಲೆಕ್ಷನ್ ಕುಂಠಿತವಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಖಾಸಗಿ ವೆಬ್ ಸೈಟ್ ವೊಂದು ವರದಿ ಮಾಡಿರುವಂತೆ ಬಾಹುಬಲಿ ಚಿತ್ರದ ವಿದೇಶಿ ವಿತರಕರ ವಿರುದ್ಧ ಪ್ರೇಕ್ಷಕರು ತಿರುಗಿಬಿದ್ದಿದ್ದು, ದುಬಾರಿ ಟಿಕೆಟ್ ದರದ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ಸಾರಿದ್ದಾರೆ. ಚಿತ್ರವನ್ನು ಬಾಯ್ಕಾಟ್ ಮಾಡುವ ಮೂಲಕ ವಿತರಕರಿಗೆ ಪ್ರೇಕ್ಷಕರು ಶಾಕ್ ನೀಡಿದ್ದು, ಬೆರಳೆಣಿಕೆ ಪ್ರೇಕ್ಷಕರು ಮಾತ್ರ ಥಿಯೇಟರ್ ಗಳತ್ತ ಆಗಮಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮೂಲಗಳ ಪ್ರಕಾರ ಪ್ರೇಕ್ಷಕರ ಮುನಿಸು ಬಾಹುಬಲಿ ಚಿತ್ರದ ವಿರುದ್ಧವಲ್ಲ. ಬದಲಿಗೆ ವಿದೇಶಗಳಲ್ಲಿ ಚಿತ್ರ ಬಿಡುಗಡೆ ಮಾಡಿರುವ ವಿತರಕರ ವಿರುದ್ಧವಂತೆ. ತೀವ್ರ ಕುತೂಹಲ ಮತ್ತು ಭಾರಿ ನಿರೀಕ್ಷೆ ಹುಟ್ಟಿಸಿದ್ದ ಬಾಹುಬಲಿ-2 ಚಿತ್ರದ ಮೂಲಕ ಅಧಿಕ ಲಾಭ ಮಾಡುವ ಉದ್ದೇಶದಿಂದ ವಿತರಕರು ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿದ್ದು, ಅಷ್ಟು ದುಬಾರಿ ಟಿಕೆಟ್ ಕೊಳ್ಳದೇ ಪ್ರೇಕ್ಷಕರು ಚಿತ್ರದಿಂದಲೇ ದೂರ ಸರಿದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹಿಂದೆಲ್ಲಾ ಚಿತ್ರದ ಟಿಕೆಟ್ ದರ ದುಬಾರಿ ಎಂದರೆ 10 ರಿಂದ 15 ಡಾಲರ್ ಗಳಷ್ಟು ಇರುತ್ತಿತ್ತು. ಆದರೆ ಬಾಹುಬಲಿ-2 ಚಿತ್ರದ ಟಿಕೆಟ್ ದರ 35 ರಿಂದ 40 ಡಾಲರ್ ಗಳಷ್ಟಿದೆ.
ದುಬಾರಿ ಟಿಕೆಟ್ ದರದಿಂದಾಗಿ ಪ್ರೇಕ್ಷಕರು ವಿಮುಖರಾಗಿದ್ದು, ಇದೇ ಕಾರಣಕ್ಕೆ ಪ್ರೇಕ್ಷಕರು ಥಿಯೇಟರ್ ನತ್ತ ಸುಳಿಯುತ್ತಿಲ್ಲ ಎಂದು ತಿಳಿದುಬಂದಿದೆ. ಇನ್ನು ಪ್ರೇಕ್ಷಕರ ಈ ವರ್ತನೆಯಿಂದ ವಿತರಕರಿಗೆ ಆಘಾತವಾಗಿದ್ದು, ಕೂಡಲೇ ಸ್ಪಷ್ಟನೆ ನೀಡಿರುವ ಅವರು ಇದು ಮೊದಲ ದಿನದ ಟಿಕೆಟ್ ದರ ಮಾತ್ರ. ಮುಂದಿನ ದಿನಗಳಲ್ಲಿ 10 ಡಾಲರ್ ಗಳಿಗೇ ಟಿಕೆಟ್ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆ ಮೂಲಕ ಮತ್ತೆ ಪ್ರೇಕ್ಷಕರನ್ನು ಥಿಯೇಟರ್ ನತ್ತ ಸೆಳೆಯಲು ಚಿತ್ರದ ವಿತರಕರು ಹರಸಾಹಸ ಪಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ನಿನ್ನೆ ಕರ್ನಾಟಕದ ಕೋಲಾರ ಮತ್ತು ಮಂಡ್ಯ ಜಿಲ್ಲೆಗಳ ಕೆಲ ಥಿಯೇಟರ್ ಗಳಲ್ಲೂ ಕೂಡ ಬಾಹುಬಲಿ-2 ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಸಿಎಂ ಸಿದ್ದರಾಮಯ್ಯ ಕೂಡ ಕರ್ನಾಟಕದಲ್ಲಿ ಟಿಕೆಟ್ ದರ ಗರಿಷ್ಠ 200 ರುಗಳಾಗುವಂತೆ ನಿರ್ದೇಶ ನೀಡಿದ್ದರು.