ನವದೆಹಲಿ: ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳ ದೇವನ ಪಾತ್ರದ ರಾಣಾ ದಗ್ಗು ಬಾಟಿ ಅವರಿಗೆ ಸಂಬಂಧ ಪಟ್ಟ ಆಸಕ್ತಿ ದಾಯಕ ವಿಷಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಣ ದಗ್ಗುಬಾಟಿಗೆ ಒಂದು ಕಣ್ಣು ಕಾಣುವುದಿಲ್ಲ ಎಂಬುದು ಹಳೇ ಸುದ್ದಿಯಾದರೂ ‘ಬಾಹುಬಲಿ 2’ ಚಿತ್ರದ ಜತೆಗೆ ರಾಣಾ ಕಣ್ಣಿನ ವಿಷಯವೂ ವ್ಯಾಪಕವಾಗಿ ಹರಿದಾಡುತ್ತಿದೆ. ಮಾರ್ಚ್ 28, 2016 ರಂದು ನಡೆದ ಸಂದರ್ಶನವೊಂದರಲ್ಲಿ ರಾಣಾ ಹೇಳಿದ್ದ ವಿಷಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನನ್ನ ಒಂದು ಕಣ್ಣಿಗೆ ಮಾತ್ರ ದೃಷ್ಟಿ ಇದೆ. ಬಾಲ್ಯದಿಂದಲೇ ನನ್ನ ಬಲಗಣ್ಣಿಗೆ ದೃಷ್ಟಿಯಿಲ್ಲ. ಯಾರೋ ಒಬ್ಬರು ಅವರ ಮರಣಾನಂತರ ನನಗೆ ನೇತ್ರದಾನ ಮಾಡಿದ್ದರು. ನಾನು ಚಿಕ್ಕವನಿದ್ದಾಗ ಶಸ್ತ್ರ ಚಿಕಿತ್ಸೆ ನೆರವೇರಿಸಿದರು, ಆದರೂ ಎರಡು ಕಣ್ಣಿನ ದೃಷ್ಟಿ ಸಿಗಲಿಲ್ಲ, ನನ್ನ ಎಡಗಣ್ಣು ಮುಚ್ಚಿದರೆ ನನಗೇನು ಕಾಣಿಸುವುದಿಲ್ಲ ಎಂದು ಹೇಳಿದ್ದಾರೆ.
ಖಾಸಗಿ ಚಾನೆಲ್ ವೊಂದರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಷಯ ಪ್ರಸ್ತಾಪಿಸಿದ್ದ ರಾಣಾ, ಅಂಗವೈಕಲ್ಯಕ್ಕೆ ಕುಗ್ಗಬಾರದು, ಅದನ್ನು ಮೀರಿ ಬೆಳೆಯಬೇಕು, ಇದಕ್ಕೆ ಅವರ ತಂದೆ ತಾಯಿಗಳು ಪ್ರೇರಣೆಯಾಗಬೇಕು ಎಂದು ಹೇಳಿದ್ದಾರೆ. ನನ್ನ ಒಂದು ಕಣ್ಣಿಗೆ ದೃಷ್ಟಿ ಇಲ್ಲದಿರುವುದು ನನ್ನನ್ನು ತುಂಬಾ ಕಾಡಿತ್ತು. ನನ್ನ ತಂದೆ ತಾಯಿ ನನ್ನ ಗೆಲುವಿಗೆ ಸ್ಫೂರ್ತಿ ನೀಡಿದರು.
ಈ ವಿಷಯ ಗೊತ್ತಿರದ ಅದೆಷ್ಟೋ ಅಭಿಮಾನಿಗಳು ಮರುಕ ವ್ಯಕ್ತಪಡಿಸಿ ಅವರ ಸಾಧನೆಯನ್ನು ಶ್ಲಾಘಿಸುತ್ತಿದ್ದಾರೆ.