ಬೆಂಗಳೂರು: ಕ್ರೇಜಿ ಬಾಯ್ ಸಿನಿಮಾದಲ್ಲಿ ನಟನೆಯ ನಂತರ ಆಶಿಕಾ ರಂಗನಾಥ್ ಅದೃಷ್ಟವೇ ಬದಲಾಗಿ ಹೋಯಿತು. ಕ್ರೇಜಿ ಬಾಯ್ ನಂತರ ಆಕೆ ಹಿಂತಿರುಗಿ ನೋಡಲೇ ಇಲ್ಲ. ಆಕೆ ನಿರೀಕ್ಷಿಸಲಾರದಷ್ಟು ಅವಕಾಶಗಳು ಬಂದಿವೆ.
ಶಿವರಾಜ್ ಕುಮಾರ್ ಅಭಿನಯದ ಲೀಡರ್ ಸಿನಿಮಾದಲ್ಲಿ ನಟಿಸುತ್ತಿರುವ ಆಶಿಕಾ ರಂಗನಾಥ್, ಮುಗುಳುನಗೆ ಮತ್ತು ರಾಜು ಕನ್ನಡ ಮೀಡಿಯಂ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಸದ್ಯ ಸಿದ್ದಾರ್ಥ್ ಮಹೇಶ್ ಅವರ ಗರುಡ ಸಿನಿಮಾದಲ್ಲಿ ಬ್ಯುಸಿಯಾಗಿರುವ ಆಶಿಕಾ, ಶರಣ್ ಅಭಿನಯದ ಲಾಡೂ ಚಿತ್ರಕ್ಕೂ ನಾಯಕಿಯಾಗಿದ್ದಾರೆ.
ನನ್ನ ಮೊದಲ ಸಿನಿಮಾ ಕ್ರೇಜಿ ಬಾಯ್ ಮಾಡುವಾಗ ನನಗೆ ಯಾವುದೇ ರೀತಿಯ ಐಡಿಯಾ ಇರಲಿಲ್ಲ, ನಿರ್ದೇಶಕ ಮಹೇಶ್ ಬಾಬು ಸಲಹೆಯಂತೆ ಸಿನಿಮಾದಲ್ಲಿ ನಟಿಸಿದೆ. ಆಮೇಲೆ ನಡೆದದ್ದೆಲ್ಲಾ ಡೆಸ್ಟಿನಿ ಎಂದು ಹೇಳಿದ್ದಾರೆ.
ಭವಿಷ್ಯದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ನನಗೆ ಯಾವ ಪ್ಲಾನ್ ಇರಲಿಲ್ಲ, ನನಗೆ ಸಿನಿಮಾರಂಗದಲ್ಲಿ ಆಸಕ್ತಿ ಇರಲಿಲ್ಲ, ನನ್ನ ಸಹೋದರಿ ಅನುಷಾ ರಂಗನಾಥ್ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಆದರೂ ನನಗೆ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇರಲಿಲ್ಲ . ಬೆಳ್ಳಿ ತೆರೆಯ ಮೇಲೆ ಒಮ್ಮೆ ನನ್ನನ್ನು ನಾನು ನೋಡಿಕೊಂಡ ಮೇಲೆ ಎಲ್ಲವೂ ಬದಲಾಗಿ ಹೋಯಿತು ಎಂದು ಆಶಿಕಾ ಹೇಳಿದ್ದಾರೆ.
ವೈವಿಧ್ಯಮಯ ಪಾತ್ರ ಸಿಗುತ್ತಿರುವುದಕ್ಕೆ ಆಶಿಕಾ ಸಂತಸ ವ್ಯಕ್ತ ಪಡಿಸಿದ್ದಾರೆ. ನರಸಿಂಹ ನಿರ್ದೇಶನದ ಲೀಡರ್ ಸಿನಿಮಾದಲ್ಲಿ ಆಶಿಕಾ ಶಿವರಾಜ್ ಕುಮಾರ್ ತಂಗಿಯ ಪಾತ್ರದಲ್ಲಿ ನಟಿಸಿದ್ದಾರೆ.
ಆರಂಭದಲ್ಲಿ ವಿವಿಧ ಪಾತ್ರಗಳಿಗಾಗಿ ಆಫರ್ ಬಂದಾಗ ನಾನು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದೆ, ಏಕೆಂದರೆ ನನಗೆ ಆ ಪಾತ್ರಗಳ ಮಹತ್ವದ ಅರಿವಿರಲಿಲ್ಲ ಎಂದು ಹೇಳಿದ್ದಾರೆ.ನನ್ನ ಸಹೋದರಿ ಹಾಗೂ ನನ್ನ ಪೋಷಕರು ನನಗೆ ಸಹಾಯ ಮಾಡಿದರು.
ಶಿವಣ್ಣ ಅಂತ ನಟರ ಜೊತೆ ಅಭಿನಯಿಸುವುದು ತುಂಬಾ ಸಂತಸದ ವಿಷಯ, ಆದರೆ ಅವರ ತಂಗಿ ಪಾತ್ರ ಮಾಡುತ್ತಿರುವುದು ಸ್ವಲ್ಪ ಕಷ್ಟವಾಗಿದೆ. ಆದರೆ ನನಗೆ ಈ ಪಾತ್ರಕ್ಕಾಗಿ ಆಫರ್ ಬಂದಾಗ ನನ್ನ ಪೋಷಕರು ತುಂಬಾ ಖುಷಿ ಪಟ್ಟರು. ಸಿನಿಮಾದಲ್ಲಿ ನನ್ನ ಪಾತ್ರದ ಪ್ರಾಮುಖ್ಯತೆ ನೋಡಿದ ಮೇಲೆ ನನ್ನ ಆಯ್ಕೆ ಸರಿಯಾಗಿದೆ ಎನಿಸುತ್ತಿದೆ ಎಂದು ಹೇಳಿದ್ದಾರೆ.
ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ ಮೊದಲ ದಿನದಗ ನೆನಪನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಕ್ರೇಜಿ ಬಾಯ್ ಸಿನಿಮಾದ ಹಾಡನ್ನು ಶಿವಣ್ಣ ನೋಡಿದ್ದಾರೆ. ನೀನು ನನ್ನ ನಾಯಕಿಯಾಗಿಯೂ ನಟಿಸಬಹುದು ಎಂದು ಹೇಳಿದಾಗ ನಾನು ಭಾವುಕಳಾದೆ ಎಂದು ಆಶಿಕಾ ನೆನಪಿಸಿಕೊಳ್ಳುತ್ತಾರೆ. ಒಂದು ವೇಳೆ ಶಿವಣ್ಣ ಜೊತೆ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕರೆ ನಾನು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos