ಸಿನಿಮಾ ಸುದ್ದಿ

ಪ್ರಭಾಸ್ ಮದುವೆ ಬಗ್ಗೆ ಸೋದರಿ ಪ್ರಗತಿ ಉಪ್ಪಲಪಾಟಿ ಹೇಳಿದ್ದೇನು?

Sumana Upadhyaya
ಮುಂಬೈ: ತೆಲುಗಿನ ಸೂಪರ್ ಹಿಟ್ ಚಿತ್ರ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಬಿಡುಗಡೆಯಾದ ನಂತರ ಅದರ ನಾಯಕ  ಪ್ರಭಾಸ್ ಇಡೀ ಭಾರತೀಯರ ಮನಗೆದ್ದಿದ್ದಾರೆ ಎಂದರೆ ಸುಳ್ಳಲ್ಲ. ದೇಶಾದ್ಯಂತ ಇಂದು ಪ್ರಭಾಸ್ ಗೆ ಅಭಿಮಾನಿಗಳಿದ್ದಾರೆ. ಅದರಲ್ಲೂ ಅವರನ್ನು ಇಷ್ಟಪಡುವ ಹುಡುಗಿಯರ ಸಂಖ್ಯೆ ಅಪಾರ.
ಅವರ ಮುಂದಿನ ಚಿತ್ರ ಯಾವುದು ಅನ್ನುವುದಕ್ಕಿಂತ ಹೆಚ್ಚು ಎಲ್ಲರಿಗೂ ಇರುವ ಕುತೂಹಲ ಅವರ ಮದುವೆ ಬಗ್ಗೆ.  ಪ್ರಭಾಸ್ ಯಾವಾಗ ಮದುವೆಯಾಗುತ್ತಾರೆ, ಯಾವ ಹುಡುಗಿಯನ್ನು ಎಂಬ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಬಾಹುಬಲಿ ಭಾಗ 2 ಬಿಡುಗಡೆಯಾದ ಮೇಲಂತೂ ಅದರಲ್ಲಿ ನಟಿಸಿದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ರೀಲ್ ಲೈಫ್ ನಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ ನಲ್ಲಿಯೂ ಒಂದಾಗಬೇಕೆಂದು ಅಭಿಮಾನಿಗಳ ಬಯಕೆಯಾಗಿದೆ.
ಹೈದರಾಬಾದಿನ ಉದ್ಯಮಿಯ ಮೊಮ್ಮಗಳನ್ನು ಪ್ರಭಾಸ್ ಮದುವೆಯಾಗುತ್ತಾರೆಂಬ ಸುದ್ದಿಯೂ ಕೇಳಿಬರುತ್ತಿದೆ. ಇವೆಲ್ಲದರ ನಡುವೆ ಇದೀಗ ಪ್ರಭಾಸ್ ಹಿರಿಯ ಸೋದರಿ ಪ್ರಗತಿ ಉಪ್ಪಲಪಾಟಿ ಮದುವೆ ಬಗ್ಗೆ ಇನ್ನೊಂದು ಆಸಕ್ತಿಕರ ವಿಷಯ ಬಹಿರಂಗಪಡಿಸಿದ್ದಾರೆ.
''ಪ್ರಭಾಸ್ ಮದುವೆ ಬಗ್ಗೆ ನಾವು ಕೂಡ ಕಾತರರಾಗಿದ್ದೇವೆ. ಈ ಗಳಿಗೆ ನಮ್ಮ ಪಾಲಿಗೂ  ಮಹತ್ವದ್ದಾಗಿರುತ್ತದೆ. ಪ್ರಭಾಸ್ ಮದುವೆ ಸಮಯದಲ್ಲಿ ನಾವು ತುಂಬಾ ವಿನೋದ, ಸಂಭ್ರಮಪಡಲು ಕಾಯುತ್ತಿದ್ದೇವೆ'' ಎಂದು ಹೇಳಿರುವುದಾಗಿ ವೆಬ್ ಸೈಟ್ ವೊಂದು ವರದಿ ಮಾಡಿದೆ.
ಪ್ರಭಾಸ್ ಮದುವೆ ಸದ್ಯದಲ್ಲಿಯೇ ನಡೆಯುವ ಲಕ್ಷಣ ಕಾಣುತ್ತಿಲ್ಲ. ಅವರೀಗ ತಮ್ಮ ವೃತ್ತಿ ಕಡೆ ಗಮನ ಹರಿಸಿದ್ದಾರೆ. ಆದರೆ ಅವರ ಸೋದರ, ಸೋದರಿಯರು, ಸಂಬಂಧಿಕರು ಮದುವೆಗೆ ಏನೇನು ಮಾಡಬೇಕೆಂಬುದರ ಬಗ್ಗೆ ಯೋಜನೆ ಹಾಕಲು ಆರಂಭಿಸಿದ್ದಾರಂತೆ.
ಪ್ರಭಾಸ್ ಮದುವೆಗೆ ಸಾಕಷ್ಟು ಸಮಯವಿರುವುದರಿಂದ ಅವರ ಅಭಿಮಾನಿ ಯುವತಿಯರು ಸದ್ಯಕ್ಕಂತೂ ನಿಟ್ಟುಸಿರುಬಿಡಬಹುದು.
SCROLL FOR NEXT