ಸ್ಯಾಂಡಲ್ವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ನೀರ್ ದೋಸೆ ಖ್ಯಾತಿಯ ಹರಿಪ್ರಿಯಾ ಇದೀಗ ದಿನಕರ್ ತೂಗದೀಪ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದು ಈ ಮಧ್ಯೆ ಸೂಜಿದಾರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಮಹಾಕಾವ್ಯ ನಾಟಕ ಕುರುಕ್ಷೇತ್ರದಲ್ಲಿ ಅಭಿನಯಿಸುತ್ತಿರುವ ಹರಿಪ್ರಿಯ ಸಂಹಾರ, ಕನಕ ಮತ್ತು ಕಥಾ ಸಂಗಮ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಜತೆಗೆ ದಿನಕರ್ ಅವರ ಮುಂದಿನ ಚಿತ್ರಕ್ಕೂ ಸಹಿ ಹಾಕಿದ್ದಾರೆ. ಏಕಕಾಲಕ್ಕೆ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಹರಿಪ್ರಿಯ ಅವರ ಸೂಜಿದಾರ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಸೂಜಿದಾರ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 3ರಿಂದ ಪ್ರಾರಂಭಗೊಳ್ಳಲಿದೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಅದರಲ್ಲಿ ಹರಿಪ್ರಿಯಾ ಸಾಧಾರಣ ಗೃಹಿಣಿಯ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಮೌನೇಶ್ ಬಡಿಗೇರ್ ಎಂಬುವರು ನಿರ್ದೇಶಿಸುತ್ತಿದ್ದಾರೆ.
ಖ್ಯಾತ ರಂಗಕರ್ಮಿ ಮೌನೇಶ್ ಬಡಿಗೇರ್ ಅವರು ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಇದೀಗ ಮೊದಲ ಬಾರಿಗೆ ಚಿತ್ರರಂಗದಲ್ಲಿ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಕಥೆಗಾರ ಇಂದ್ರಕುಮಾರ್ ಅವರ ಸಣ್ಣಕಥೆಯಿಂದ ಸ್ಫೂರ್ತಿ ಪಡೆದು ಮೌನೇಶ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.