ಸಿನಿಮಾ ತಂಡದೊಂದಿಗೆ ನಟಿ ಸರಿತಾ
ಬೆಂಗಳೂರು: ಸತೀಶ್ ನಿನಾಸಂ ಮತ್ತು ರಚಿತಾ ರಾಮ್ ಅಭಿನಯದ ಅಯೋಗ್ಯ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶಿಸುತ್ತಿದ್ದು, ಹಲವು ವರ್ಷಗಳ ನಂತರ ನಟಿ ಸರಿತಾ ಕನ್ನಡ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
1975 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸರಿತಾ 1989 ರಲ್ಲಿ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಳ್ಳುವ ಮುನ್ನ 20 ಸಿನಿಮಾಗಳಲ್ಲಿ ನಟಿಸಿದ್ದರು.
ವರನಟ ಡಾ. ರಾಜಕುಮಾರ್ ಅಭಿನಯದ ಹೊಸಬೆಳಕು, ಚಲಿಸುವ ಮೋಡಗಳು, ಕಾಮನ ಬಿಲ್ಲು, ಭಕ್ತ ಪ್ರಹ್ಲಾದ ಸಿನಿಮಾಗಳಲ್ಲಿ ಸರಿತಾ ನಟಿಸಿದ್ದರು, ಅದಾದ ನಂತರ ವಿಷ್ಣುವರ್ಧನ್ ಜೊತೆ ಮಲಯಮಾರುತ ಸಿನಿಮಾದಲ್ಲಿ ಅಭಿನಯಿಸಿದ್ದರು.
ನಿರ್ದೇಶಕ ಮಹೇಶ್ ಕುಮಾರ್ ನನಗಾಗಿ ಒಂದು ಅದ್ಭುತ ಪಾತ್ರ ಸೃಷ್ಟಿಸಿದ್ದಾರೆ. ಟ್ರೈಲರ್ ನೋಡಿದ ಕೂಡಲೇ ನಾನು ಒಪ್ಪಿಕೊಂಡೆ. ಸಿನಿಮಾ ಕಥೆ ಅದ್ಭುತವಾಗಿದೆ. ಸಿನಿಮಾ ಬಗ್ಗೆ ಹೆಚ್ಚಿನ ಅಭಿರುಚಿ ಹೊಂದಿರುವವರು ಈ ಚಿತ್ರ ನಿರ್ಮಿಸುತ್ತಿದ್ದಾರೆ ಎಂದು ಸರಿತಾ ಹೇಳಿದ್ದಾರೆ.
ನಟ ಸತೀಶ್ ನಿನಾಸಂ ಅವರ ತಾಯಿ ಪಾತ್ರದಲ್ಲಿ ಸರಿತಾ ಅಭಿನಯಿಸುತ್ತಿದ್ದಾರೆ. ಇಂದಿನ ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚಿತ್ರ ನಿರ್ಮಾಣದ ಪ್ರಕ್ರಿಯೆಗಳಲ್ಲಿ ಅಗಾಧ ಪ್ರಮಾಣದ ಬದಲಾನಣೆಗಳಾಗಿವೆ, ಆದರೂ ನಾನು ಹಾಗೇಯೇ ಇದ್ದೇನೆ, ನನ್ನ ಪಾತ್ರಗಳ ಗುಣ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.
ನಾನು ಸಿನಿಮಾ ರಂಗಕ್ಕೆ ಬಂದಾಗಿನಿಂದಲೂ ಇಲ್ಲಿಯವರೆಗೂ ಉತ್ತಮ ನಿರ್ದೇಶಕರುಗಳ ಜೊತೆ ಕೆಲಸ ಮಾಡಿದ್ದೇನೆ, ಅದಕ್ಕಾಗಿ ನನಗೆ ತುಂಬಾ ಖುಷಿಯಿದೆ,ಪ್ರತಿಯೊಂದು ಸಿನಿಮಾದ ಪಾತ್ರಗಳಿಗೂ ನಾನು ನ್ಯಾಯ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಕನ್ನಡ ನೆಲ ನನ್ನ ತವರು ಮನೆ, ಇಂದಿನ ಯುವ ನಿರ್ದೇಶಕರು ನನ್ನನ್ನು ಮರೆಯದೇ ನೆನಪಿನಲ್ಲಿಟ್ಟುಕೊಂಡಿರುವುದು ನನಗೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.