ಬಹುದೊಡ್ಡ ತಾರಾಗಣದಲ್ಲಿ ಮೂಡಿಬರುತ್ತಿರುವ ಪೌರಾಣಿಕ ಚಿತ್ರ ಮುನಿರತ್ನ ಅವರ ಕುರುಕ್ಷೇತ್ರದ ಅಂತಿಮ ಹಂತದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಈ ಚಿತ್ರದ ಶೂಟಿಂಗ್ ಕಳೆದ ತಿಂಗಳು 24ರಂದು ಆರಂಭಗೊಂಡಿತ್ತು.
ಕ್ಲೈಮಾಕ್ಸ್ ಹಂತದ ಕಾಳಗ ಸನ್ನಿವೇಶವನ್ನು ಚಿತ್ರಿಸುವಲ್ಲಿ ಚಿತ್ರತಂಡ ನಿರತವಾಗಿದೆ.
ಕಳೆದ 15 ದಿನಗಳಿಂದ ದೊಡ್ಡ ಯುದ್ಧದ ಸನ್ನಿವೇಶವನ್ನು ಚಿತ್ರೀಕರಿಸುತ್ತಿದ್ದು ಇನ್ನು ಕೆಲ ದಿನಗಳವರೆಗೆ ನಡೆಯಲಿದೆ ಎನ್ನುತ್ತಾರೆ ದರ್ಶನ್. ಸದ್ಯದಲ್ಲಿಯೇ ಚಿತ್ರದ ಶೂಟಿಂಗ್ ಮುಗಿಯುವ ಸಾಧ್ಯತೆಯಿದೆ. ಮುಕ್ತಾಯಕ್ಕೆ ನಿಗದಿತ ದಿನಾಂಕವನ್ನೇನು ನಿಶ್ಚಯಿಸಿಲ್ಲ. ಚಿತ್ರ ಅದರಷ್ಟಕ್ಕೆ ಶೂಟಿಂಗ್ ಮುಗಿಯಲಿ ಎಂದುಕೊಂಡಿದ್ದೇವೆ ಎನ್ನುತ್ತಾರೆ.
ತಮ್ಮ 50ನೇ ಚಿತ್ರ ಪೂರೈಸುತ್ತಿರುವ ದರ್ಶನ್ ಅವರ ಮುಂದಿನ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಸಾಕಷ್ಟು ಚರ್ಚೆಗಳು ಕೇಳಿಬರುತ್ತಿತ್ತು. ಇದಕ್ಕೆಲ್ಲಾ ದರ್ಶನ್ ಇದೀಗ ಫುಲ್ ಸ್ಟಾಪ್ ಹಾಕಿದ್ದಾರೆ. ಒಂದು ಚಿತ್ರದ ಶೂಟಿಂಗ್ ಮುಗಿದ ನಂತರ ಮತ್ತೊಂದು ಚಿತ್ರವನ್ನು ಮಾಡುತ್ತಾ ಹೋಗುತ್ತೇನೆ, ನನ್ನ ಮುಂದಿನ ಚಿತ್ರ ಶೈಲಜಾ ನಾಗ್ ಅವರ ನಿರ್ಮಾಣದಲ್ಲಿ ಮೂಡಿಬರಲಿದೆ ಎಂದು ಸ್ಪಷ್ಟನೆ ಕೊಟ್ಟರು ದರ್ಶನ್.
ಒಂದು ಚಿತ್ರದ ಬಗ್ಗೆ ಬೇರೆ ನಿರ್ಮಾಪಕ ಬಳಿ ಚರ್ಚೆ ನಡೆಸುವುದನ್ನು ದರ್ಶನ್ ಇಷ್ಟಪಡುವುದಿಲ್ಲವಂತೆ. ನಾನು ಮಾಡಬೇಕಾದ ಚಿತ್ರಗಳ ಪಟ್ಟಿಯಿದೆ. ಒಂದು ಚಿತ್ರದಲ್ಲಿ ನಟಿಸುವ ಕುರಿತು ಖಾತ್ರಿಯಾಗುವವರೆಗೆ ಬೇರೆ ಪ್ರಾಜೆಕ್ಟ್ ಗಳ ಬಗ್ಗೆ ಬೇರೆ ನಿರ್ಮಾಪಕರಲ್ಲಿ ಮಾತುಕತೆ ನಡೆಸಲು ನಾನು ಇಷ್ಟಪಡುವುದಿಲ್ಲ. ಈ ಮೂಲಕ ತಮ್ಮ ಮುಂದಿನ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿರುವ ಸುದ್ದಿಗಳಿಗೆ ವಿರಾಮ ಹಾಕಿದರು ದರ್ಶನ್.