ಬೆಂಗಳೂರು: ಚಿತ್ರರಂಗದ ಇತಿಹಾಸದಲ್ಲಿ ಪ್ರಾರಂಭದಲ್ಲಿ ಮೂಕಿ ಚಿತ್ರಗಳದ್ದೇ ಯುಗ. ಅದಾದ ಬಳಿಕ ವಾಣಿಜ್ಯೋದ್ದೇಶಿತ ಚಿತ್ರಗಳಲ್ಲಿ ಸಂಭಾಷಣೆ, ಹಾಡುಗಳೇ ಪ್ರಧಾನವಾಗಿ ಕಾಣುತ್ತಿದ್ದವು. ಇಂದೂ ಸಹ ಯಾವುದೇ ಚಿತ್ರಕ್ಕೆ ಸಂಬಾಷಣೆ, ಸಂಗೀತವಿಲ್ಲದ ಚಿತ್ರವನ್ನು ಕಲ್ಪಿಸಿಕೊಳ್ಳಲೂ ಸಾದ್ಯವಿಲ್ಲ. ಆದರೆ ಇಲ್ಲೊಬ್ಬ ನಿರ್ದೇಶಕರು ತಾವು ಮತ್ತೆ ಮೂಕಿ ಚಿತ್ರಗಳ ಯುಗಕ್ಕೆ ಪ್ರೇಕ್ಷಕರನ್ನು ಕೊಂಡೊಯ್ಯಲು ತಯಾರಾಗಿದ್ದು ಮೂಕಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರೋದ್ಯಮಕ್ಕೆ ಹೊಸ ಪರಿಚಯವಾದ ಶ್ರೀಹರಿ ತಾವೇ ಬರೆದ ಕಥೆಯೊಂದನ್ನು ತೆರೆಯ ಮೇಲೆ ತರಲು ಹೊರಟಿದ್ದಾರೆ. ಇದೊಂದು ಫೀಚರ್ ಫಿಲ್ಮ್ ಆಗಿದ್ದು 'ಮೌನದಲ್ಲಿಯೇ ಎಲ್ಲವನ್ನೂ ಹೇಳಬೇಕು' ಎನ್ನುವುದು ಅವರ ಆಶಯ. ಇದೀಗ ಚಿತ್ರದ ಪೂರ್ವ ತಯಾರಿ ನಡೆದಿದ್ದು ಜನವರಿಯಿಂದ ಚಿತ್ರೀಕರಣ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಐಂದ್ರಿತಾ ರೇ ನಟಿಸುತ್ತಿದ್ದಾರೆ.
ಇದಾಗಲೇ ಸ್ಯಾಂಡಲ್ ವುಡ್ ನಲ್ಲಿ ಕೆಲ ಚಿತ್ರಗಳಲ್ಲಿ ಅಭಿನಯಿಸಿರುವ ಐಂದ್ರಿತಾ ಕನ್ನಡದಲ್ಲಿ ಉತ್ತಮ ಪಾತ್ರವೊಂದಕ್ಕೆ ಜೀವ ತುಂಬಲು ಕಾಯುತ್ತಿದ್ದರು. ಇದೀಗ ಈ ಹೊಸ ನಿರ್ದೇಶಕರ ಮೂಕಿ ಚಿತ್ರದಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ. ಚಿತ್ರತಂಡ ಚಿತ್ರದ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದ್ದು ಶೂಟಿಂಗ್ ಪ್ರಾರಂಭವಾದ ನಂತರವಷ್ಟೇ ಚಿತ್ರದ ಕುರಿತಂತೆ ಇನ್ನಷ್ಟು ವಿಚಾರಗಳು ತಿಳಿಯಲಿದೆ.
ಶ್ರೀಹರಿ ಸುಮಾರು ಹದಿನಾಲ್ಕು ವರ್ಷಗಳ ಕಾಲ ಜಾಹೀರಾತು ಹಾಗೂ ಮಾದ್ಯಮ ಕ್ಷೇತ್ರದಲ್ಲಿ ಕೆಲಸ ಮಾಅಡಿದ್ದ ಅನುಭವ ಹೊಂದಿದ್ದಾರೆ. ಆ ಅನುಭವಗಳನ್ನಿಟ್ಟುಕೊಂಡು ಇದೀಗ ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ. ಇನ್ನು ಚಿತ್ರದಲ್ಲಿ ಬಾಲಿವುಡ್, ಕಾಲಿವುಡ್ ನಟರು ಕಾಣಿಸಿಕೊಳ್ಳಲಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿದೆ. ಜತೆಗೆ ಮೂಕಿ ಚಿತ್ರಗಳಲ್ಲಿ ಅನುಭವವಿರುವ ಉತ್ತಮ ತಂತ್ರಜ್ಞರನ್ನೂ ತಮ್ಮ ಚಿತ್ರಕ್ಕೆ ದುಡಿಸಿಕೊಳ್ಳಲು ಚಿತ್ರ ತಂಡ ಯೋಜಿಸಿದೆ ಎನ್ನಲಾಗಿದೆ.
ಚಿತ್ರವನ್ನು ಪ್ಯಾನ್ ಇಂಡಿಯಾ ಒನ್ ಸಂಸ್ಥೆ ಹಂಚಿಕೆ ಮಾಡಲಿದೆ. ಕುರುಕ್ಷೇತ್ರ, ಕನ್ನಡದಲ್ಲಿ ವಿಲನ್, ಕೆಜಿಎಫ್, ಟಗರು ಮತ್ತು ಪುಣೆತ್ ರಾಜ್ ಕುಮಾರ್ ನಟನೆಯ ಶಶಾಂಕ್ ನಿರ್ದೇಶನದ ಚಿತ್ರವೂ ಸೇರಿ 2018ರಲ್ಲಿ ಬಹು ನಿರೀಕ್ಷಿತ ಚಿತ್ರಗಳು ತೆರೆಗೆ ಬರಲಿವೆ. ಇದರೊಡನೆ ಹೊಸ ನಿರ್ದೇಶಕರ ಮೂಕಿ ಚಿತ್ರವೂ ಸಹ ಸಾಕಷ್ಟು ಸದ್ದು ಮಾಡುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics