ಒಂದರ ಹಿಂದೆ ಮತ್ತೊಂದು ಸಿನಿಮಾ ಬಿಡುಗಡೆಯಿಂದ ಕಿರಿಕ್ ಪಾರ್ಟಿ ನಾಯಕಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಕಳೆದ ವಾರ ಅಂಜನಿಪುತ್ರ ಬಿಡುಗಡೆಯಾಗಿದ್ದರೆ ಈ ವಾರ ಚಮಕ್ ಚಿತ್ರ ಬಿಡುಗಡೆಯಾಗಲಿದೆ. ಚಮಕ್ ಚಿತ್ರದಲ್ಲಿ ಗಣೇಶ್ ಸ್ತ್ರೀ ರೋಗ ತಜ್ಞನಾಗಿ ಮತ್ತು ರಶ್ಮಿಕಾ ಗೃಹಿಣಿಯಾಗಿ ಅಭಿನಯಿಸಿದ್ದಾರೆ.
ಚಮಕ್ ಚಿತ್ರದಲ್ಲಿ ವಿವಿಧ ಶೇಡ್ ನಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ನಟಿಯಾಗಿ ಪಕ್ವತೆ ಪಡೆದಿದ್ದಾರೆ. ಚಮಕ್ ನನ್ನ ಮೂರನೇ ಚಿತ್ರವಾಗಿದ್ದು ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ನನಗೆ ಸಾಧ್ಯವಾದಷ್ಟು ಅತ್ಯುತ್ತಮ ನಟನೆಯನ್ನು ನೀಡಿದ್ದೇನೆ. ನನ್ನಿಂದ ಉತ್ತಮವಾದ ನಟನೆಯನ್ನು ನಿರ್ದೇಶಕ ಸುನಿ ಹೊರತೆಗೆದಿದ್ದಾರೆ. ಇದರಿಂದಾಗಿ ನನ್ನಿಂದ ಇದು ಸಾಧ್ಯವೇ ಎಂದು ಯೋಚಿಸದ ರೀತಿಯ ಪಾತ್ರವನ್ನು ನಾನು ಮಾಡಿದ್ದೇನೆ. ಚಮಕ್ ನಂತರ ನನಗೆ ಅವಕಾಶ ನೀಡಿದರೆ ವಿವಿಧ ರೀತಿಯ ಪಾತ್ರಗಳನ್ನು ಮಾಡಬಲ್ಲೆ ಎಂಬ ಅರಿವು ನನಗೆ ಆಗಿದೆ ಎಂದರು.
ಗೃಹಿಣಿಯಾಗಿ ಚಿತ್ರದಲ್ಲಿ ರಶ್ಮಿಕಾ ಕೆಲವು ಕೆಲಸಗಳನ್ನು ಮೊದಲ ಬಾರಿಗೆ ಮಾಡಿದ್ದಾರೆ. ರಂಗೋಲಿ ಬಿಡಿಸುವುದು, ರೋಯಲ್ ಎನ್ ಫೀಲ್ಡ್ ಬೈಕ್ ಓಡಿಸುವುದು ಮತ್ತು ಸ್ಕೂಬಾ ಡೈವಿಂಗ್ ಮಾಡುವುದು ಇತ್ಯಾದಿಗಳನ್ನು ಚಿತ್ರದಲ್ಲಿ ಮಾಡಿದ್ದಾರೆ. ಚಿತ್ರದಲ್ಲಿ ವೈನ್ ಕುಡಿಯುವ ದೃಶ್ಯವೊಂದಿದ್ದು, ಅದನ್ನು ಕೂಡ ರಶ್ಮಿಕಾ ಚೆನ್ನಾಗಿ ನಿಭಾಯಿಸಿದ್ದಾರೆ. ಕೊಡಗಿನವಳಾಗಿ ನನ್ನ ಪೋಷಕರ ಜೊತೆ ವೈನ್ ಕುಡಿಯುತ್ತೇನೆ. ಚಿತ್ರದಲ್ಲಿ ದೃಶ್ಯವೊಂದಕ್ಕೆ ವೈನ್ ಕುಡಿಯಬೇಕಾಗಿ ಬಂದಾಗ ಸ್ವಲ್ಪ ಹೆಚ್ಚು ಕುಡಿಯಬೇಕಾಯಿತು ಎಂದು ರಶ್ಮಿಕಾ ನಗುತ್ತಾರೆ.
ಗೃಹಿಣಿಯ ಪಾತ್ರ ನಿಭಾಯಿಸುವುದು ನಿಜಕ್ಕೂ ಸವಾಲು. ಸಾಮಾನ್ಯವಾಗಿ ಗೃಹಿಣಿಯರೆಂದರೆ ನೀರಸ ಜೀವನ ಎಂದು ನಾವು ಅಂದುಕೊಳ್ಳುತ್ತೇವೆ. ಗೃಹಿಣಿಯರು ಹೆಚ್ಚು ಅಡುಗೆ ಮಾಡುವುದು ಮತ್ತು ಮನೆಯನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಗೃಹಿಣಿಯರ ಪಾತ್ರ ಇದಕ್ಕಿಂತಲೂ ಹೆಚ್ಚಾಗಿರುತ್ತದೆ ಎನ್ನುತ್ತಾರೆ ರಶ್ಮಿಕಾ.
ಚಮಕ್ ಚಿತ್ರದಲ್ಲಿ ರಶ್ಮಿಕಾ ಎಷ್ಟು ಮಗ್ನರಾಗಿದ್ದರೆಂದರೆ ಒಂದು ದೃಶ್ಯದಲ್ಲಿ ನಿರ್ದೇಶಕರು ಕಟ್ ಎಂದು ಹೇಳಿದ ಮತ್ತೆಯೂ ಅಳುತ್ತಿದ್ದರಂತೆ. ಅದು ನಾನು ಪಾತ್ರವನ್ನು ನಿಭಾಯಿಸುವ ರೀತಿ. ಚಿತ್ರದ ದೃಶ್ಯವೊಂದಕ್ಕೆ ನಾನು ಅಳಬೇಕೆಂದರೆ ನಾನು ಬೇಜಾರಾಗುವಂತೆ ಮಾಡಿ ಎಂದು ಕೇಳುತ್ತೇನೆ. ನಾನು ವಾಸ್ತವವಾಗಿ ಅಳಬೇಕು. ಇಲ್ಲದಿದ್ದರೆ ದೃಶ್ಯದಲ್ಲಿ ನಾನು ಅಳಲು ಸಾಧ್ಯವಿಲ್ಲ. ನಾನು ನಗಬೇಕಾದರೂ ಅಷ್ಟೆ. ತೆರೆಯ ಮೇಲೆ ಕೃತ್ರಿಮವಾಗಿ ನಾನು ನಟಿಸಲು ಸಾಧ್ಯವಿಲ್ಲ. ನನ್ನ ಹೃದಯದಿಂದ ಅದು ಬರಬೇಕು ಎನ್ನುತ್ತಾರೆ ರಶ್ಮಿಕಾ.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣದಡಿ ಚಮಕ್ ಚಿತ್ರ ನಿರ್ಮಾಣವಾಗಿದ್ದು ಜುಡ್ಹಾ ಸಾಂಡಿಯವರ ಸಂಗೀತ ಸಂತೋಷ್ ರೈ ಪಾತಾಜೆಯವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos