ಅಂಜನಿಪುತ್ರನಿಗೆ ಎದುರಾಗಿದೆ ನ್ಯಾಯಾಂಗ ನಿಂದನೆ ಸಂಕಷ್ಟ!
ಬೆಂಗಳೂರು: ಪವರ್ ಸ್ಟಾರ್ ಪುನೀತ್ ಅಭಿನಯದ ಅಂಜನಿಪುತ್ರ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರ ನಿರ್ಮಾಪಕರು, ಚಿತ್ರ ತಂಡವು ನ್ಯಾಯಾಲಯದ ಆದೇಶ ಪಾಲನೆ ಮಾಡದ ಇದೀಗ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಎದುರಿಸಬೇಕಾಗಿದೆ.
ವಕೀಲರ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇದೆ ಎನ್ನುವ ಕಾರಣಕ್ಕೆ ಅಂಜನಿಪುತ್ರ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ವಕೀಲರಾದ ಜಿ. ನಾರಾಯಣಸ್ವಾಮಿ ನ್ಯಾಯಾಲಯದ ಮೊರೆ ಹೋಗಿದ್ದರು. ಅದಾಗ ನ್ಯಾಯಾಲಯ ಅವರ ಅರ್ಜಿಯನ್ನು ವಿಚಾರಣೆ ನಡೆಸಿ ಚಿತ್ರ ಪ್ರದರ್ಶನಕ್ಕೆ ತಡೆ ನೀಡಿದ್ದು ಮುಂದಿನ ವಿಚಾರಣೆಯನ್ನು ಜ. 3ಕ್ಕೆ ಮುಂದೂಡಿತ್ತು.
ಆದರೆ ನ್ಯಾಯಾಲಯದ ಆದೇಶ ಹೊರತಾಗಿಯೂ ಚಿತ್ರಮಂದಿರಗಳಲ್ಲಿ ಅಂಜನಿಪುತ್ರ ಪ್ರದರ್ಶನ ಕಾಣುತ್ತಿದ್ದು ಅರ್ಜಿದಾರರಾದ ನಾರಾಯಣ ಸ್ವಾಮಿ ಸೇರಿದಂತೆ ಐವರು ವಕೀಲರು ನಿರ್ಮಾಪಕ, ನಿರ್ದೇಶಕರ ವಿರುದ್ಧ ನ್ಯಾಯಾಂಗ ನಿಂದನೆ ದೂರು ನೀಡಿದ್ದಾರೆ.ಇಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನ್ಯಾ.ಐ.ಎಫ್. ಬಿದರಿ ಅವರನ್ನೊಳಗೊಂಡ ಪೀಠ ವಿಚಾರಣೆಗೆ ಮಾನ್ಯ ಮಾಡಿದೆ.
ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಚಿತ್ರವು ಡಿ.21ರಂದು ರಾಜ್ಯಾದ್ಯಂತ ತೆರೆ ಕಂಡಿತ್ತು.