ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಚಿತ್ರ ವಿವಾದಕ್ಕೆ ಕಾರಣವಾಗಿದ್ದು, ನಟನೋರ್ವ ನಾಯಕ ನಟಿಯ ನಡತೆ ಕುರಿತು ಟೀಕೆ ಮಾಡಿ ಇದೀಗ ಪೇಚಿಗೆ ಸಿಲುಕಿದ್ದಾನೆ.
ಐಸ್ ಮಹಲ್ ಎಂಬ ಚಿತ್ರದ ನಾಯಕ ನಟಿ ಕೀರ್ತಿ ಭಟ್ ಅವರಿಗೆ ಅದೇ ಚಿತ್ರದಲ್ಲಿ ಪೋಷಕ ನಟರಾಗಿ ಅಭಿನಯಿಸಿರುವ ರಾಜಶೇಖರ್ ಬುದಾಳ ಅವರು ಕಿರುಕುಳ ನೀಡಿದ್ದು, ನಟಿಯ ನಡತೆ ಬಗ್ಗೆ ಟೀಕಿಸಿದ್ದಾರೆ ಎಂದು ಆರೋಪಿಸಲಾಗಿದೆ. ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತ ಚಿತ್ರದ ನಾಯಕ ನಟ ಕಿಶೋರ್ ಅವರೊಂದಿಗೆ ಕೀರ್ತಿಭಟ್ ಅವರು ಸಂಬಂಧ ಹೊಂದಿದ್ದಾರೆ ಎಂದು ರಾಜಶೇಖರ್ ಆರೋಪಿಸಿದ್ದು, ಈ ಬಗ್ಗೆ ನಿರ್ದೇಶಕ ಕಿಶೋರ್ ಅವರೊಂದಿಗೆ ಜಗಳ ಕೂಡ ನಡೆಸಿದ್ದರು.
ಈ ವಿಚಾರ ನಟಿಗೆ ತಿಳಿದಿದ್ದು, ಕೂಡಲೇ ರಾಜಶೇಖರ್ ಅವರಿಗೆ ಫೋನಾಯಿಸಿ ವಿಚಾರಿಸಿದ್ದಾರೆ. ಈ ವೇಳೆ ರಾಜಶೇಖರ್ ನಟಿ ಕೀರ್ತಿ ಭಟ್ ಅವರೊಂದಿಗೂ ಕೆಟ್ಟದಾಗಿ ವರ್ತಿಸಿದ್ದು, ಮಾತ್ರವಲ್ಲದೇ ನಿನ್ನ ಕನ್ಯತ್ವ ಪರೀಕ್ಷೆ ಮಾಡಿಸಿ ಸಾಬಿತು ಪಡಿಸು ಎಂದು ಹೇಳಿದ್ದಾರೆ. ಇದರಿಂದ ಕೆರಳಿದ ನಟಿ ಕೀರ್ತಿ ಭಟ್ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಸಂಬಂಧ ನಟ ರಾಜಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಠಾಣೆಯಲ್ಲೇ ರಾಜಶೇಖರ್ ವಿರುದ್ಧ ಸಿಡಿದೆದಿದ್ದ ನಟಿ ಪೊಲೀಸರ ಎದುರೇ ನಟ ರಾಜಶೇಖರ್ ಅವರಿಗೆ ತಾವು ಧರಿಸಿದ್ದ ಶೂನಿಂದ ಥಳಿಸಿದ್ದಾರೆ.
ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಳಿಕ ನಟ ರಾಜಶೇಖರ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಬ್ಯಾನರ್ ಬದಲಾವಣೆಯೇ ವಿವಾದಕ್ಕೆ ಕಾರಣ?
ಇನ್ನು ಈ ವಿವಾದಕ್ಕೆ ಚಿತ್ರ ಬ್ಯಾನರ್ ಬದಲಾವಣೆಯೇ ಕಾರಣ ಎಂದು ಹೇಳಲಾಗುತ್ತಿದ್ದು. ಚಿತ್ರ ನಾಯಕ ಹಾಗೂ ನಿರ್ದೇಶಕ ಕಿಶೋರ್ ಹೇಳುವಂತೆ ಚಿತ್ರಕ್ಕೆ ಕಿಶೋರ್ ನಿರ್ಮಾಪಕರಾಗಿದ್ದರೆ ನಟ ರಾಜಶೇಖರ್ ಸಹ ನಿರ್ಮಾಪಕರಂತೆ. ಚಿತ್ರಕ್ಕೆ 15 ಲಕ್ಷ ಹಣ ನೀಡುವುದಾಗಿ ಹೇಳಿದ್ದ ರಾಜಶೇಖರ್ 1.65 ಲಕ್ಷ ರು, ಮಾತ್ರ ನೀಡಿದ್ದರು. ಹೀಗಾಗಿ ಇದರಿಂದ ರೋಸಿ ಹೋಗಿದ್ದ ಕಿಶೋರ್ ವಾಣಿಜ್ಯ ಮಂಡಳಿಗೆ ತೆರಳಿ ಚಿತ್ರ ಬ್ಯಾನರ್ ಬದಲಿಸಿದ್ದರು. ಇದರಿಂದ ಕುಪಿತಗೊಂಡ ರಾಜಶೇಖರ್ ನಿರ್ದೇಶಕ ಕಿಶೋರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಟಿ ಕೀರ್ತಿ ಭಟ್ ಮತ್ತು ಕಿಶೋರ್ ನಡುವೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಾರೆ ನಿರ್ಮಾಪಕರ ನಡುವಿನ ಜಗಳದಲ್ಲಿ ನಟಿ ಕೀರ್ತಿ ಭಟ್ ತಮ್ಮದಲ್ಲದ ತಪ್ಪಿಗೆ ಇಂತಹ ವಿವಾದದಲ್ಲಿ ಸಿಲುಕಿರುವುದು ದುರಂತವೇ ಸರಿ..