ನಟ ಶಿವರಾಜ್ ಕುಮಾರ್ - ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್
ಬೆಂಗಳೂರು: ವಿಷಯ ಪ್ರಶಸ್ತವಾಗಿದ್ದರೆ ವಿವಿಧ ನಿರ್ದೇಶಕರ ಜೊತೆಗೆ, ವಿವಿಧ ಬಗೆಯ ಸಿನೆಮಾಗಳ ಜೊತೆಗೆ ಪ್ರಯೋಗ ಮಾಡುವುದಕ್ಕೆ ನಟ ಶಿವರಾಜ್ ಕುಮಾರ್ ಎಂದಿಗೂ ಸಿದ್ಧ. ಸದ್ಯಕ್ಕೆ ಕೈತುಂಬಾ ಕೆಲಸ ಇದ್ದು ಬ್ಯುಸಿಯಾಗಿರುವ ನಟ, ಕೆ ಮಂಜು ನಿರ್ಮಾಣದ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನೆಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ನಾಗತಿಹಳ್ಳಿಯವರ ಜೊತೆಗೆ ಶಿವಣ್ಣನವರ ಮೊದಲ ಸಿನೆಮಾ ಇದಾಗಲಿದೆ.
ಇನ್ನು ಅಧಿಕೃತ ಘೋಷಣೆಯಾಗಿಲ್ಲದೆ ಹೋದರು, ಶಿವಣ್ಣನವರಿಗೆ ನಿರ್ದೇಶಕರು ಈಗಾಗಲೇ ಕಥೆ ಹೇಳಿದ್ದಾರಂತೆ. ನಟ ಚಿತ್ರೀಕರಣಕ್ಕೆ ದಿನಾಂಕ ನೀಡಿದ ಮೇಲೆ ಸಿನೆಮಾಗೆ ಅಧಿಕೃತ ಚಾಲನೆ ನೀಗಲಿದೆ.
ಇದರ ಬಗ್ಗೆ ಮಾತನಾಡಿರುವ ನಿರ್ದೇಶಕ "ನಾನು ಈಗಾಗಲೇ ಕಥೆ ಹೇಳಿದ್ದೇನೆ ಮತ್ತು ಅವರು ಬಹಳ ಇಷ್ಟಪಟ್ಟಿದ್ದಾರೆ. ಮಾರ್ಚ್ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಆಗ ಹೆಚ್ಚಿನ ವಿವರಗಳನ್ನು ನೀಡುತ್ತೇನೆ" ಎನ್ನುವ ನಾಗತಿಹಳ್ಳಿ "ಎಲ್ಲವು ಅಂತಿಮವಾದ ಮೇಲೆ ನಾನು ಹೆಚ್ಚು ಮಾತನಾಡಲು ಇಚ್ಛಿಸುತ್ತೇನೆ" ಎನ್ನುತ್ತಾರೆ.
ನಿರ್ದೇಶಕ ನಾಗತಿಹಳ್ಳಿ ಸದ್ಯಕ್ಕೆ ಅಮೆರಿಕಾ ಮತ್ತು ಇಂಗ್ಲೆಂಡ್ ಪ್ರವಾಸ ನಡೆಸಿದ್ದು, ಅಲ್ಲಿ ಹಾಲಿವುಡ್ ತಂತ್ರಜ್ಞರನ್ನು ಭೇಟಿ ಮಾಡುತ್ತಿದ್ದಾರಂತೆ. "ಸಮಾನಾಂತರವಾಗಿ ನಾನು ಮತ್ತೊಂದು ತಾಜಾ ಸಿನೆಮಾದ ಮೇಲೆ ಕೆಲಸ ಮಾಡುತ್ತಿದ್ದು ಹೊಸ ಮುಖಗಳನ್ನು ಅದಕ್ಕೆ ತೊಡಗಿಸಕೊಳ್ಳಲಿದ್ದೇನೆ. ಇದಕ್ಕಾಗಿ ನಾನು ಹಾಲಿವುಡ್ ತಂತ್ರಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದೇನೆ. ಆದರೆ ಇದೆಲ್ಲಾ ಶಿವಣ್ಣ ಸಿನೆಮಾ ಪ್ರಾರಂಭವಾಗುವುದರ ಮೇಲೆ ಅವಲಂಬಿತವಾಗಿದೆ. ಅವರು ಸಿದ್ಧವಾದರೆ ನಾನು ಕೂಡಲೇ ಪ್ರಾರಂಭಿಸಬಹುದು. ಇಲ್ಲದೆ ಹೋದರೆ ನಾನು ಮತ್ತೊಂದು ಸಿನೆಮಾ ಪ್ರಾರಂಭಿಸುತ್ತೇನೆ" ಎನ್ನುತ್ತಾರೆ.
'ಅಮೆರಿಕ ಅಮೆರಿಕ', 'ಅಮೃತಧಾರೆ', 'ಹೂಮಳೆ', 'ಮಾತಾಡ್ ಮಾತಾಡ್ ಮಲ್ಲಿಗೆ' ಮತ್ತು ಇತ್ತೀಚಿನ 'ಇಷ್ಟಕಾಮ್ಯ' ಸಿನೆಮಾದ ನಿರ್ದೇಶಕ, ಶಿವಣ್ಣನವರ ಸಿನೆಮಾಗೆ ಯಾವ ವಿಷಯ ಆಯ್ಕೆ ಮಾಡಿಕೊಂಡಿರಬಹುದು ಎಂಬ ಕುತೂಹಲ ಇದೆ.
ಈಮಧ್ಯೆ ಶಿವರಾಜ್ ಕುಮಾರ್ ಯೋಗಿ ಜಿ ರಾಜ್ ನಿರ್ದೇಶನದ 'ಬಂಗಾರ s / ೦ ಬಂಗಾರದ ಮನುಷ್ಯ' ಸಿನೆಮಾಗೆ ಡಬ್ಬಿಂಗ್ ಮಾಡಿ ಮುಗಿಸಿದ್ದು, 'ಲೀಡರ್' ಮತ್ತು ಸೂರಿ ನಿರ್ದೇಶನದ 'ಟಗರು' ಸಿನೆಮಾಗಳಲ್ಲಿ ಸಮಾನಾನಂತರವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಮಲಯಾಳಂ ಸಿನೆಮಾ 'ಒಪ್ಪಂ' ರಿಮೇಕ್ ಗು ಒಪ್ಪಿಗೆ ನೀಡಿದ್ದಾರೆ.