ಎಲ್ಟಿಟಿಇ ಜನರೊಂದಿಗೆ ನಿರ್ದೇಶಕ ರಮೇಶ್
ಮನರಂಜನಾ ಕೇಂದ್ರಿಕೃತ ಚಿತ್ರಗಳ ಕಡೆ ಹೆಚ್ಚು ಗಮನ ಕೊಡದ ನಿರ್ದೇಶಕ ಎಎಂಆರ್ ರಮೇಶ್, ರಮೇಶ್ ಅವರು ತಮ್ಮ ಮುಂದಿನ ಆಸ್ಫೋಟ ಚಿತ್ರಕ್ಕಾಗಿ ಶ್ರೀಲಂಕಾದ ಜಫ್ನಾಗೆ ಭೇಟಿ ನೀಡಿ ಹಿಂದಿರುಗಿದ್ದಾರೆ.
ಆಸ್ಫೋಟ-ದಿ ಹ್ಯುಮನ್ ಬಾಂಬ್ ಚಿತ್ರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯನ್ನು ಆಧಾರವಾಗಿಟ್ಟುಕೊಂಡು ಮಾಡುತ್ತಿರುವ ಚಿತ್ರ. ಸೈನೆಡ್ ಮತ್ತು ಅಟ್ಟಹಾಸದಂತಾ ಚಿತ್ರಗಳನ್ನು ತೆರೆಗೆ ತರಬೇಕಾದರೆ ಅದು ಒಂದು ಸವಾಲಿನ ಕೆಲಸ. ಇಂತಹ ಚಿತ್ರಗಳ ಚಿತ್ರೀಕರಣಕ್ಕೂ ಮುನ್ನ ಹೆಚ್ಚು ಸಂಶೋಧನೆ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲೇ ನಿರ್ದೇಶಕರು ಶ್ರೀಲಂಕಾಗೆ ಭೇಟಿ ನೀಡಿ ಸುಮಾರು 25 ಮಂದಿ ಜತೆ ಚರ್ಚಿಸಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಮಾಜಿ ಸಿಬಿಐ ನಿರ್ದೇಶಕ ಕಾರ್ತೀಕೇಯನ್, ಕೆ.ಶ್ರೀನಿವಾಸನ್, ಗೋಪಾಲ್ ಬಿ. ಹೊಸೂರು, ರಾಮಲಿಂಗ್, ರಾಜೀವ್ ಗಾಂಧಿ ಹತ್ಯೆ ಕೇಸಿನಲ್ಲಿ ಜೈಲಿಗೆ ಹೋಗಿ ಬಂದ ಎಲ್ಟಿಟಿಇ ಸಿಂಪಥೈಸರ್ ರಂಗನಾಥ್ ಸುಸೇಂದ್ರನ್ ಅವರನ್ನು ಭೇಟಿ ಮಾಡಿದ್ದಾರೆ.
ಆಸ್ಫೋಟ ಚಿತ್ರ ಚಿತ್ರೀಕರಣ ಘಟನೆ ನಡೆದ ಪ್ರದೇಶಗಳಲ್ಲೇ ಚಿತ್ರೀಕರಿಸಲು ರಮೇಶ್ ಮುಂದಾಗಿದ್ದು ಇದಕ್ಕಾಗಿ ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಮತ್ತು ಶ್ರೀಲಂಕಾ ಅಧಿಕಾರಿಗಳನ್ನು ಭೇಟಿ ಮಾಡಿ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡು ಬಂದಿದ್ದಾರೆ.
ಆಸ್ಪೋಟ ಚಿತ್ರ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಚಿತ್ರವನ್ನು ರಮೇಶ್ ಪತ್ನಿ ಇಂದುಮತಿ ನಿರ್ಮಿಸುತ್ತಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ದಿ ಹ್ಯುಮನ್ ಬಾಂಬ್ ಮತ್ತು ತಮಿಳಿನಲ್ಲಿ ಮನಿತಾ ವೆಡಿಗುಂಡು ಎಂದು ಶೀರ್ಷಿಕೆ ಇಡಲಾಗಿದೆ.