ಸಿನಿಮಾ ಸುದ್ದಿ

ಭಾರತದಲ್ಲಿ ಸೆನ್ಸಾರ್ ಪ್ರಮಾಣಪತ್ರ ನಿರಾಕರಣೆ; 'ಲಿಪ್ಸ್ಟಿಕ್...'ಗೆ ಗ್ಲಾಸ್ಗೋ ಸಿನಿಮೋತ್ಸವದಲ್ಲಿ ಪ್ರಶಸ್ತಿ

Guruprasad Narayana
ಗ್ಲಾಸ್ಗೋ: ಭಾರತದಲ್ಲಿ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದ ಅಲಂಕೃತ ಶ್ರೀವಾಸ್ತವ ಅವರ ಸಿನೆಮಾ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ'ಗೆ ಗ್ಲಾಸ್ಗೋ ಸಿನಿಮೋತ್ಸವ ೨೦೧೭ ರಲ್ಲಿ ಪ್ರೇಕ್ಷಕರ ಪ್ರಶಸ್ತಿ ಪಡೆದುಕೊಂಡಿದೆ. ಈ ಪ್ರಶಸ್ತಿ ದೊರೆಯಲು ಇದು ಅತ್ಯತ್ತಮ ಸಮಯವಾಗಿತ್ತು ಎಂದು ನಿರ್ದೇಶಕ ಹೇಳಿದ್ದಾರೆ. 
ಸಿನಿಮೋತ್ಸವದ ಪ್ರೇಕ್ಷಕರು ಮತಹಾಕಿ ಗೆಲ್ಲಿಸಿದ ಈ ಸಿನೆಮಾಗೆ ಸ್ಕಾಟ್ಲೆಂಡ್ ದೇಶದ ನಟ ಡೇವಿಡ್ ಟೆನ್ನಾಂಟ್, ಶ್ರೀವಾಸ್ತವ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 
ಭಾರತ ದೇಶದ ಸಣ್ಣ ಪಟ್ಟಣದ ನಾಲ್ಕು ಜನ ಮಹಿಳೆಯರು ತಮ್ಮ ಸ್ವಾತಂತ್ರಕ್ಕಾಗಿ ವಿವಿಧ ರಹಸ್ಯ ಜೀವನವನ್ನು ನಡೆಸುವ ಕಥೆ ಹೊಂದಿರುವ ಈ ಸಿನೆಮಾದಲ್ಲಿ ಕೊಂಕಣ್ ಸೇನ್ ಶರ್ಮ ಮತ್ತು ರತ್ನ ಪಾಠಕ್ ಷಾ ನಟಿಸಿದ್ದಾರೆ. ಈ ಸಿನೆಮಾವನ್ನು ಪ್ರಕಾಶ್ ಝಾ ನಿರ್ಮಿಸಿದ್ದಾರೆ. 
ಲೈಂಗಿಕ ದೃಶ್ಯಗಳು, ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ದೂರಿ ಇದಕ್ಕೆ ಪ್ರಮಾಣ ಪಾತ್ರ ನೀಡಲು ಫೆಬ್ರವರಿ ೨೩ ರಂದು ಸಿನೆಮಾ ಪ್ರಮಾಣಪತ್ರಕ್ಕಾಗಿರುವ ಕೇಂದ್ರ ಸಮಿತಿ (ಸಿ ಎಫ್ ಬಿ ಸಿ) ನಿರಾಕರಿಸಿತ್ತು,. ಇದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. 
"ಗ್ಲಾಸ್ಗೋ ನಿನಿಮೋತ್ಸವದಲ್ಲಿ ಸ್ಕಾಟ್ ರೈಲ್ ಪ್ರೇಕ್ಷಕರ ಪ್ರಶಸ್ತಿ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ' ಸಿನೆಮಾಗೆ ಸಿಕ್ಕಿರುವುದಕ್ಕೆ ನನಗೆ ಅತೀವ ಗೌರವ ಎನಿಸಿದೆ. ಇದು ಮಹಿಳಾ ಕೇಂದ್ರಿತ ಸಿನೆಮಾ ಮತ್ತು ಮಹಿಳಾ ದೃಷ್ಟಿಕೋನದಿಂದ ಹೆಣೆದಿರುವ ಕಥೆಯಾಗಿರುವುದಕ್ಕೆ ಭಾರತದಲ್ಲಿ ಪ್ರಮಾಣಪತ್ರ ನಿರಾಕರಿಸುವ ವೇಳೆಯಲ್ಲಿಯೇ ಇದಕ್ಕೆ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ"ಎಂದು ಶ್ರೀವಾಸ್ತವ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
"ಗ್ಲಾಸ್ಗೋದ ಜನ ಈ ಸಿನೆಮಾ ಮೆಚ್ಚಿರುವುದು, ಈ ಸಿನೆಮಾ ಸಂಸ್ಕೃತಿಗಳನ್ನು, ಗಡಿಗಳನ್ನು ಮೀರಿರುವ ಕಥೆ ಹೊಂದಿರುವುದಕ್ಕೆ ಸಾಕ್ಷಿ. ಮಹಿಳಾ ದೃಷ್ಟಿಕೋನದಿಂದ ಮಹಿಳಾ ಕೇಂದ್ರಿತ ಕಥೆಗಳನ್ನು ಹೇಳುವುದು ಮುಖ್ಯ ಎಂಬುದಕ್ಕೆ ಕೂಡ ಇದು ಸಾಕ್ಷಿ. ಈ ಪ್ರಶಸ್ತಿ ನನಗೆ ಭರವಸೆ ನೀಡಿದೆ. ಇದು ಧೈರ್ಯ ನೀಡಿದೆ. ನಮ್ಮ ಸದ್ದು ಅಡಗಿಸುವವರಿಗೆ ಹೆದರದೆ ಮಹಿಳೆಯರಾಗಿ ನಮ್ಮ ಕಥೆಗಳನ್ನು ಹೇಳುವುದರಲ್ಲಿ ನಂಬಿಕೆ ಹುಟ್ಟಿಸಿದೆ" ಎಂದು ಕೂಡ ಅವರು ಹೇಳಿದ್ದಾರೆ. 
ಪೂಜಾ ಭಟ್, ಫರ್ಹಾನ್ ಅಖ್ತರ್ ಮತ್ತು ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಬಹಳಷ್ಟು ತಾರೆಯರು ಸಿ ಎಫ್ ಬಿ ಸಿ ನಿರ್ಧಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ. 
SCROLL FOR NEXT