ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಸೌಂದರ್ಯ ರಜನೀಕಾಂತ್ ಮಂಗಳವಾರ ಬೆಳಗ್ಗೆ ಆಟೋಗೆ ಗುದ್ದಿ ಅಪಘಾತಕ್ಕೆ ಕಾರಣರಾಗಿದ್ದಾರೆ.
ಆಳ್ವಾರ್ ಪೇಟೆ ಪ್ರದೇಶದಲ್ಲಿ ನಿಂತಿದ್ದ ಆಟೋಗೆ ಸೌಂದರ್ಯ ರಜನೀಕಾಂತ್ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಗಾಯಗೊಂಡಿದ್ದಾನೆ, ಜೊತೆಗೆ ಸೌಂದರ್ಯ ರಜನೀಕಾಂತ್ ವಿರುದ್ಧ ಎಫ್ ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿ ತಿಳಿಸಿದೆ.
ಪರಿಸ್ಥಿತಿ ಗಂಭೀರತೆ ಅರಿತ ಸೌಂದರ್ಯ ಕೂಡಲೇ ಸಹೋದರಿ ಐಶ್ವರ್ಯಾ ಮನೆಗೆ ತೆರಳಿ ತನ್ನ ಬಾವ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಾಯಕ ಧನುಷ್ ಅವರನ್ನು ಸ್ಥಳಕ್ಕೆ ಕರೆ ತಂದಿದ್ದಾರೆ.
ತಮಿಳು ಚಿತ್ರರಂಗದ ಬಹಳ ವಿಧೇಯ ನಟ ಎಂದು ಪ್ರಸಿದ್ಧಿಯಾಗಿರುವ ಧನುಷ್ ಸ್ಥಳಕ್ಕೆ ಬಂದು ಆಟೋ ಚಾಲಕನ ಮನವೊಲಿಸಿ, ವೈದ್ಯಕೀಯ ವೆಚ್ಚ ಭರಿಸಿ, ಆಟೋಗೆ ಆಗಿರುವ ಹಾನಿ ಸರಿಪಡಿಸಲು ಹಣದ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಧನುಷ್ ಆಗಮನದ ನಂತರ ಪರಿಸ್ಥಿತಿ ಶಾಂತವಾಗಿದೆ. ನಿರ್ಮಾಪಕಿಯಾಗಿರುವ ಸೌಂದರ್ಯ ರಜನೀಕಾಂತ್ ಧನುಷ್ ಜೊತೆ ವಿಐಪಿ ಎಂಬ ಸಿನಿಮಾ ಮಾಡುತ್ತಿದ್ದಾರೆ.