ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಬಾಕ್ಸ್ ಆಫಿಸ್ ನಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದು, ಸೂಪರ್ ಸ್ಟಾರ್ ಗಳ ಸಾಲಿನಲ್ಲಿ ಸ್ಥಾನ ಪಡೆಯುವತ್ತ ಮುನ್ನುಗ್ಗಿದ್ದಾರೆ. ಮೂಲಗಳ ಪ್ರಕಾರ ಬಿಡುಗಡೆಯಾದ ಮೊದಲ ವಾರದಲ್ಲಿಯೇ ಸಿನೆಮಾ ೬.೫ ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ!
ನೋಟು ಹಿಂಪಡೆತದ ನಂತರ ಕನ್ನಡ ಚಿತ್ರರಂಗ ಹಲವು ಬವಣೆಗಳಿಗೆ ತುತ್ತಾಗಿತ್ತು. ಈಗ ರಕ್ಷಿತ್ ಗೆ ದೊರಕಿರುವ ಅಭೂತಪೂರ್ವ ಸ್ವಾಗತ ಚಿತ್ರರಂಗಕ್ಕೆ ತುಸು ತಂಪೆರೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ಜಯಣ್ಣ ವಿತರಣೆ ಮಾಡಿದರು.
ರಕ್ಷಿತ್ ಶೆಟ್ಟಿ ಜೊತೆಗೆ ನಿರ್ಮಾಣದಲ್ಲಿ ಭಾಗಿಯಾಗಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಹೇಳುವಂತೆ ಮುಂದಿನ ೫ ವಾರಗಳಲ್ಲಿ ಗಳಿಕೆ ೩೦ ಕೋಟಿ ಮುಟ್ಟಬಹುದು ಎಂದಿದ್ದಾರೆ.
ನಟ ನಿವಿನ್ ಪೌಲಿ ಇತ್ತೀಚೆಗಷ್ಟೇ ರಕ್ಷಿತ್ ಸಿನೆಮಾ ಬಗ್ಗೆ ಟ್ವೀಟ್ ಮಾಡಿ "ಈ ಹುಡುಗ (ರಕ್ಷಿತ್ ಶೆಟ್ಟಿ) ಎಲ್ಲರು ಎದ್ದು ತನ್ನತ್ತ ಗಮನಹರಿಸುವಂತೆ ಮಾಡಿದ್ದಾನೆ. ರಕ್ಷಿತ್ ಶೆಟ್ಟಿಗೆ ಅಭಿನಂದನೆಗಳು" ಎಂದಿದ್ದರು.
ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಸಿನೆಮಾದ ತಮಿಳು ರಿಮೇಕ್ ನಲ್ಲಿ ಈ ಮಲಯಾಳಂ ನಟ ನಟಿಸಿದ್ದು ವಿಶೇಷ.