ರಿಷಿ ಕಪೂರ್-ದಾವೂದ್ ಇಬ್ರಾಹಿಂ
ನವದೆಹಲಿ: ಖ್ಯಾತ ಬಾಲಿವುಡ್ ನಟ ರಿಷಿ ಕಪೂರ್ ತಮ್ಮ ಜೀವನದ ಹಲವು ಘಟನೆಗಳ ಬಗ್ಗೆ ತಮ್ಮ ಪುಸ್ತಕ 'ಖುಲ್ಲಂ ಖುಲ್ಲಾ'ದಲ್ಲಿ ಮೊದಲ ಬಾರಿಗೆ ಹೇಳಿಕೊಂಡಿದ್ದು, ಭಾರತ ಹುಡುಕುತ್ತಿರುವ ಭೂಗತ ದೊರೆ-ಉಗ್ರ ದಾವೂದ್ ಇಬ್ರಾಹಿಂನನ್ನ ಭೇಟಿ ಮಾಡಿದ್ದಕ್ಕೆ ವಿಷಾದವೇನಿಲ್ಲ ಎಂದಿದ್ದಾರೆ.
ಟಿವಿ ವಾಹಿನಿಯೊಂದರಲ್ಲಿ ನೀವು ೧೯೮೮ರಲ್ಲಿ ದಾವೂದ್ ಇಬ್ರಾಹಿಂ ಭೇಟಿ ಮಾಡಿದ್ದಕ್ಕೆ ವಿಷಾದವಿದೆಯೇ ಎಂಬ ಪ್ರಶ್ನೆಗೆ "ಅದರ ಬಗ್ಗೆ ವಿಷಾದ ಪಡುವುದೇಕೆ" ಎಂದು ರಿಷಿ ಮರುಪ್ರಶ್ನಿಸಿದ್ದಾರೆ.
ಆರ್ ಡಿ ಬರ್ಮನ್, ಆಶಾ ಬೊಂಸ್ಲೆ ಮತ್ತು ಬಿಟ್ಟು ಆನಂದ್ ಜೊತೆಗೆ ಕಾರ್ಯಕ್ರಮವೊಂದಕ್ಕೆ ದುಬೈಗೆ ತೆರಳಿದಾಗ, ತಮ್ಮ ಹತ್ತಿರ ಸುಳಿದ ವ್ಯಕ್ತಿಯೊಬ್ಬ 'ಭಾಯಿ ನಿಮ್ಮ ಜೊತೆಗೆ ಮಾತನಾಡಲಿದ್ದಾರೆ" ಎಂದು ತಿಳಿಸಿದ ಎಂದು ಘಟನೆಯ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.
"ಅವರು ನನ್ನನ್ನು ಚಹಾಗೆ ಆಹ್ವಾನಿಸಿದರು... ಅವರು ಆಗ ಕಳ್ಳ ಮಾತ್ರ ಆಗಿದ್ದರಿಂದ ನಾನು ತಪ್ಪೇನಿಲ್ಲ ಎಂದು ಅವರ ಮನೆಗೆ ಹೋದೆ" ಎಂದು ರಿಷಿ ಹೇಳಿದ್ದಾಗ ಅವರು ಈಗಲೂ ಅಪರಾಧಿಯಲ್ಲವೇ ಎಂಬ ಪ್ರಶ್ನೆಗೆ "ಏನೀಗ? ನನ್ನ ಜೀವನದಲ್ಲಿ ನಾನು ಎಷ್ಟೋ ಅಪರಾಧಿಗಳನ್ನು ಭೇಟಿ ಮಾಡಿದ್ದೇನೆ. ಬಹುಷಃ ನಾನು ಅಪರಾಧಿ ಇರಬಹುದು, ಆದರೆ ನಾನು ಯಾವುದೇ ಗಂಭೀರ ಅಪರಾಧಗಳನ್ನು ಎಸಗಿಲ್ಲ. ಆದರೆ ಹೌದು ನಟನಾಗಿ ನನಗೆ ಅವರ ಕಥೆಯನ್ನು ತಿಳಿಯಬಯಸಿದ್ದೆ.
"ನಾನು 'ಡಿ-ಡೇ'ನಲ್ಲಿ ಅವರ ಪಾತ್ರ ಅಭಿನಯಿಸಲು ಅವರಿಂದ ಸ್ಫೂರ್ತಿ ಪಡೆದಿದ್ದೆ" ಎಂದಿರುವ ರಿಷಿ ನಾಲ್ಕು ಘಂಟೆಗಳ ಭೇಟಿಯಲ್ಲಿ ಎರಡು ಸುತ್ತು ಚಹಾ ಕುಡಿದಿದ್ದಾಗಿ ಹೇಳಿದ್ದಾರೆ.
"ಅವರಿಗೆ ಭಾರತದಲ್ಲಿ ನ್ಯಾಯ ಸಿಗಬಹುದೆಂಬ ನಂಬಿಕೆ ಇರಲಿಲ್ಲ ಎಂದು ತಿಳಿಸಿದರು" ಎಂದು ಕೂಡ ರಿಷಿ ಹೇಳಿದ್ದಾರೆ.
ಇದು ೧೯೯೩ ರ ಬಾಂಬೆ ಬಾಂಬ್ ಸ್ಫೋಟಕ್ಕೂ ಮುಂಚಿತವಾಗಿ ನಡೆದದ್ದು ಈಗ ಅವರ ಜೊತೆಗೆ ಸಂಪರ್ಕ ಇಲ್ಲ ಎಂದು ಕೂಡ ರಿಷಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics