ಬೆಂಗಳೂರು: ಕಳೆದ ವರ್ಷ ಅಕ್ಟೋಬರ್ 21 ರಂದು ಬಿಡುಗಡೆಯಾಗಿ, ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಮಾ ರಾಮಾ ರೇ... ಚಿತ್ರ 100 ದಿನಗಳನ್ನು ಪೂರೈಸಿದೆ.
ವಿನೂತನ ಚಿತ್ರಕಥೆ ಹೊಂದಿದ್ದ ರಾಮಾ ರಾಮಾ ರೇ.. ಚಿತ್ರ ಆರಂಭದ ದಿನಗಳಿಂದಲೂ ಜನಮನ್ನಣೆ ಗಳಿಸಿದೆ. ಬಿಡುಗಡೆಯಾದ ಮೊದಲು ಕೇವಲ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳಲ್ಲಿ ಮಾತ್ರ ಪ್ರದರ್ಶನ ಕಂಡಿದ್ದ ಚಿತ್ರ, ನಂತರದ ದಿನಗಳಲ್ಲಿ ಥಿಯೇಟರ್ ಗಳಿಗೂ ವ್ಯಾಪಿಸಿ ಅದ್ಭುತ ಪ್ರಂಶಸೆ ಗಳಿಸಿದೆ.
ನಿರ್ದೇಶಕ ಡಿ. ಸತ್ಯಪ್ರಕಾಶ್ ಅವರ ಮೊದಲ ಚಿತ್ರ ರಾಮಾ ರಾಮಾ ರೇ ಆಗಿದ್ದು, ಹಿಂದಿಗೂ ಡಬ್ ಆಗುತ್ತಿದೆ. ಭಾಷಾಂತರದ ಕೆಲಸ ಮುಕ್ತಾಯಗೊಂಡ ನಂತರ ಮುಂಬೈ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕನ್ನಡ ಹಿಂದಿ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸತ್ಯಪ್ರಕಾಶ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಿದ್ಧಸೂತ್ರಗಳಿಗೆ ಸೆಡ್ಡು ಹೊಡೆದು ತಯಾರಾಗಿದ್ದ ರಾಮಾ ರಾಮಾ ರೇ ಚಿತ್ರ 2016 ರ ಅತ್ಯುತ್ತಮ ಸದಭಿರುಚಿಯ ಚಿತ್ರಗಳ ಸಾಲಿನಲ್ಲಿ ಸ್ಥಾನ ಪಡೆದಿತ್ತು.