ಬೆಂಗಳೂರು: ದರ್ಶನ್ ದುರ್ಯೋಧನನಾಗಿ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಸಿನೆಮಾ ದಿನದಿಂದ ದಿನಕ್ಕೆ ಕುತೂಹಲವನ್ನು ಹೆಚ್ಚಿಸುತ್ತಿದೆ. ಈಗಾಗಲೇ ಸಿನಿಮಾಗಾಗಿ ಭರದಿಂದ ಸಿದ್ಧತೆ ಸಾಗುತ್ತಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
ಆಗಸ್ಟ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಪೂರ್ವಸಿದ್ಧತೆಗಾಗಿ ೧೦ ತಂಡಗಳು ದುಡಿಯುತ್ತಿವೆ. ಸದ್ಯಕ್ಕೆ ಕಲಾ ನಿರ್ದೇಶಕರು ಮತ್ತು ವಸ್ತ್ರವಿನ್ಯಾಸಕರು ಅತಿ ಹೆಚ್ಚು ಬ್ಯುಸಿಯಾಗಿದ್ದಾರೆ. "ನಿರ್ಮಾಣ ಸಂಸ್ಥೆ ವಸ್ತ್ರ ವಿನ್ಯಾಯಾಕ್ಕಾಗಿಯೇ ಒಂದು ಸಂಸ್ಥೆಯನ್ನು ನೇಮಿಸಿದೆ. ಕಳೆದ ಒಂದು ತಿಂಗಳಿಂದ ಅವರು ಕೆಲಸ ಮಾಡುತ್ತಿದ್ದು, ಸದ್ಯಕ್ಕೆ ದರ್ಶನ ಅಭಿನಯಿಸುತ್ತಿರುವ ದುರ್ಯೋಧನನ ವಸ್ತ್ರಗಳನ್ನು ಸಿದ್ಧಪಡಿಸಿದ್ದಾರೆ ಮತ್ತು ಮುಂದೆ ರವಿಚಂದ್ರನ್ ಅಭಿನಯಿಸಲಿರುವ ಕೃಷ್ಣನ ಪಾತ್ರದ ವಸ್ತ್ರಗಳ ಮೇಲೆ ಕೆಲಸ ಪ್ರಾರಂಭಿಸಲಿದ್ದಾರೆ" ಎಂದು ತಿಳಿಸುತ್ತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು.
ಸದ್ಯಕ್ಕೆ ದರ್ಶನ್ 'ತಾರಕ್' ಸಿನೆಮಾ ಚಿತ್ರೀಕರಣಕ್ಕಾಗಿ ವಿದೇಶದಲ್ಲಿದ್ದು ಹಿಂದಿರುಗಿದ ನಂತರ ತಮ್ಮ ೫೦ ನೆಯ ಚಿತ್ರ 'ಕುರುಕ್ಷೇತ್ರ'ದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಹಾಗೆಯೇ ಸಿನೆಮಾದ ಕಮ್ಯೂಟರ್ ಗ್ರಾಫಿಕ್ಸ್ ಗಾಗಿ 'ಬಾಹುಬಲಿ' ಸಿನೆಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ವಿ ಹರಿಕೃಷ್ಣ ಸಂಗೀತ ನೀಡುತ್ತಿದ್ದು, ದಕ್ಷಿಣ ಭಾರತದ ಹಲವು ಜನಪ್ರಿಯ ನಟರು ಸಿನೆಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ದ್ರೌಪದಿ ಪಾತ್ರವನ್ನು ನಿಭಾಯಿಸಲು ನಯನತಾರ ಅವರಿಗೆ ಕೇಳಿಕೊಳ್ಳಲಾಗಿದೆ ಎಂದು ತಿಳಿದುಬಂದಿದ್ದು, ಈ ನಿಟ್ಟಿನಲ್ಲಿ ಯಾವುದೇ ಅಂತಿಮ ನಿರ್ಧಾರ ಹೊರಹೊಮ್ಮಿಲ್ಲ.