ಸಿನಿಮಾ ಸುದ್ದಿ

೧೦೦ರೂ ಒಳಗಿನ ಸಿನೆಮಾ ಟಿಕೆಟ್ ಗಳಿಗೆ ಜಿ ಎಸ್ ಟಿ ಕಡಿತ; ನಿರ್ಧಾರ ಸ್ವಾಗತಿಸಿದ ನಿರ್ಮಾಪಕರ ಸಂಘ

Guruprasad Narayana
ಮುಂಬೈ: ೧೦೦ ರೂ ಒಳಪಟ್ಟ ಸಿನೆಮಾ ಟಿಕೆಟ್ ಗಳಿಗೆ ಜಿ ಎಸ್ ಟಿ ದರವನ್ನು ೨೮% ನಿಂದ ೧೮%ಕ್ಕೆ ಇಳಿಸಿರುವ ಸರ್ಕಾರದ ನಿರ್ಧಾರವನ್ನು ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರ ಸಂಘ ಸೋಮವಾರ ಸ್ವಾಗತಿಸಿದೆ. 
"ಉದ್ದಿಮೆಯ ನ್ಯಾಯಬದ್ಧ ಕಳವಳವನ್ನು ಅರ್ಥಮಾಡಿಕೊಂಡು ೧೦೦ ರೂ ಒಳಪಟ್ಟ ಸಿನೆಮಾ ಟಿಕೆಟ್ ಗಳಿಗೆ ಜಿ ಎಸ್ ಟಿ ದರವನ್ನು ೨೮% ನಿಂದ ೧೮% ಇಳಿಸಿದ ಗೌರವಾನ್ವಿತ ವಿತ್ತ ಸಚಿವ ಮತ್ತು ಜಿ ಎಸ್ ಟಿ ಸಮಿತಿಯ ಕ್ರಮವನ್ನು ಭಾರತೀಯ ಸಿನೆಮಾ ರಂಗ ಸ್ವಾಗತಿಸುತ್ತದೆ" ಎಂದು ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಸಿದ್ಧಾರ್ಥ್ ರಾಯ್ ಕಪೂರ್ ಹೇಳಿದ್ದಾರೆ. 
"ಭಾರತೀಯ ಚಿತ್ರರಂಗಕ್ಕೆ ಇದಕ್ಕಿಂತಲೂ ಕಡಿಮೆ ತೆರಿಗೆ ಹಾಕಬೇಕು ಮತ್ತು ಹೆಚ್ಚಿನ ಹೂಡಿಕೆಗೆ, ನೌಕರಿಗಳಿಗೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಬೇಕು ಎಂಬ ನಂಬಿಕೆಯನ್ನು ನಾವು ಮುಂದುವರೆಸುತ್ತೇವೆ. ಈ ಎಲ್ಲ ಕ್ರಮಗಳು ಸರ್ಕಾರಕ್ಕೆ ಇನ್ನು ಹೆಚ್ಚಿನ ತೆರಿಗೆ ತಂದುಕೊಟ್ಟು, ವಿಶ್ವಕ್ಕೆ ಭಾರತೀಯ ಸಂಸ್ಕೃತಿಯನ್ನು ಹೆಚ್ಚು ಪಸರಿಸಲಿದೆ" ಎಂದು ಕೂಡ ಕಪೂರ್ ಹೇಳಿದ್ದಾರೆ. 
ಕಳೆದ ವಾರ ಜಿ ಎಸ್ ಟಿ ಕಳವಳವನ್ನು ವ್ಯಕ್ತಪಡಿಸಿದ್ದ ನಿರ್ಮಾಪಕರ ಸಂಘ ಇದರ ಬಗ್ಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜೊತೆಗೆ ಮಾತುಕತೆ ನಡೆಸಿ ಬೆಂಬಲ ಕೋರಿದ್ದರು. 
ಪ್ರಾದೇಶಿಕವಾಗಿ ಹೆಚ್ಚುವರಿ ತೆರಿಗೆಗಳನ್ನು ಸಿನೆಮಾಗಳಿಗೆ ಹಾಕದಂತೆ ಕೂಡ ಸಿನೆಮಾ ಉದ್ದಿಮೆಯ ಪರವಾಗಿ ಕಪೂರ್ ಆಗ್ರಹಿಸಿದ್ದರು. 
SCROLL FOR NEXT