ಬೆಂಗಳೂರು: 'ಎರಡನೇ ಸಲ' ಸಿನೆಮಾದ ನಿರ್ದೇಶಕ ಗುರುಪ್ರಸಾದ್ ಮತ್ತು ನಿರ್ಮಾಪಕ ಯೋಗೇಶ್ ನಾರಾಯಣ್ ವಿವಾದಗಳನ್ನು ಬಗೆಹರಿಸಿಕೊಂಡಿದ್ದು ಈಗ ಸಿನೆಮಾ ಪ್ರಚಾರಕ್ಕೆ ಮುಂದಾಗಿರುವುದು, ಮುಖ್ಯನಟರಾದ ಧನಂಜಯ್ ಮತ್ತು ಸಂಗೀತಾ ಭಟ್ ಅವರಿಗೆ ಸಂತಸ ತಂದಿದೆ.
"ನಮ್ಮ ಮುಖಗಳಲ್ಲಿ ಈ ಸುದ್ದಿ ಸಂತಸವನ್ನು ಮರುಕಳಿಸಿದೆ" ಎನ್ನುವ ನಟಿ ಸಂಗೀತ "ನಿರ್ದೇಶಕ ಮತ್ತು ನಿರ್ಮಾಪಕರ ನಡುವೆ ವಿವಾದ ಎದ್ದಿದೆ ಮತ್ತು ನಿರ್ಮಾಪಕರು ಸಿನೆಮಾವನ್ನು ಹಿಂದಕ್ಕೆ ಕರೆಯುತ್ತಿದ್ದಾರೆ ಎಂದು ತಿಳಿದಾಗ ನನ್ನ ಕಣ್ಣಲ್ಲಿ ನೀರು ಹರಿದಿತ್ತು. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸರಿಯಾದ ಸಮಯಕ್ಕೆ ಮಧ್ಯಸ್ಥಿಕೆ ವಹಿಸಿ ಈಗ ವಿವಾದ ಬಗೆಹರಿಸಿರುವುದು ಸಂತಸದ ಸಂಗತಿ. ಗುರುಪ್ರಸಾದ್ ಅವರೇ ಸಿನೆಮಾ ಪ್ರಚಾರಕ್ಕೆ ಇಳಿದಿರುವದೂ ಇನ್ನು ಉತ್ಸಾಹ ಮೂಡಿಸಿದೆ" ಎನ್ನುತ್ತಾರೆ.
ಕಳೆದ ವಾರ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿನ ನಟನೆಗಾಗಿ ಸಂಗೀತಾ ಭಟ್ ಎಲ್ಲೆಡೆಯಿಂದ ಪ್ರಶಂಸೆ ಗಳಿಸಿದ್ದರು. ಧನಂಜಯ್ ಜೊತೆಗೆ ಉತ್ತಮ ಕೆಮಿಸ್ಟ್ರಿ ಹೊಂದಿರುವ ನಟಿ ರೋಮ್ಯಾನ್ಸ್ ದೃಶ್ಯಗಳಲ್ಲಿ ಮೂಡಿಸಿದ್ದ ಭಾವನಾತ್ಮಕ ನಟನೆಯನ್ನು ಜನ ಆಸ್ವಾದಿಸಿ ಒಪ್ಪಿಕೊಂಡಿದ್ದರು. "ಕೇವಲ ಟ್ರೇಲರ್ ನೋಡಿ ಸಿನೆಮಾ ನೋಡದೆ ಇದ್ದವರು ಋಣಾತ್ಮಕ ಪ್ರತಿಕ್ರಿಯೆ ನೀಡಿದ್ದರು, ಏಕೆಂದರೆ ಸಿನೆಮಾ ಅಶ್ಲೀಲ ಎಂದು ಅವರು ತಿಳಿದಿದ್ದರು" ಎನ್ನುವ ನಟಿ "ಆದರೆ ಅವರು ಸಿನೆಮಾ ನೋಡಲು ನಾನು ಶಾಂತಚಿತ್ತದಿಂದ ಕಾದೆ. .. ಈಗ ಅದು ಫಲ ನೀಡಿದೆ. ಈಗ ನನ್ನ ಅಭಿಮಾನಿ ಬಳಗ ದುಪ್ಪಟ್ಟಾಗಿದೆ ಮತ್ತು ಅವರೆಲ್ಲರಿಂದ ಧನಾತ್ಮಕ ಪ್ರತಿಕ್ರಿಯೆ ಬರುತ್ತಿದೆ" ಎನ್ನುತ್ತಾರೆ ಯುವ ನಟಿ.
"ನಾನು ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಎರಡೆರಡು ಸಿನೆಮಾಗಳನ್ನು ಮಾಡಿದ್ದರು, ನನ್ನ ನಟನೆಗೆ ಇಷ್ಟು ದೊಡ್ಡ ಮಟ್ಟದ ಪ್ರಶಂಸೆ ಬರುತ್ತಿರುವುದು ಇದೆ ಮೊದಲು" ಎನ್ನುವ ಅವರು ಯಶಸ್ಸಿಗೆ ಒಂದಷ್ಟು ಅದೃಷ್ಟ ಬೇಕಾಗುತ್ತದೆ ಎಂದಿದ್ದಾರೆ.
ಇಲ್ಲಿಯವರೆಗೂ ಕಮರ್ಷಿಯಲ್ ಸಿನೆಮಾದಲ್ಲಿ ನಟಿಸಲು ಯಾವ ನಿರ್ಮಾಪಕ-ನಿರ್ದೇಶಕ ಕೇಳಿಲ್ಲ ಎನ್ನುವ ಸಂಗೀತ "ಅದು ಏಕೆ ಎಂದು ಗೊತ್ತಿಲ್ಲ.." ಎನ್ನುತ್ತಾರೆ. "ನನಗೆ ಅವಕಾಶ ನೀಡಿ ನಂತರ ತಿರಸ್ಕರಿಸಿದರೆ ಪರವಾಗಿಲ್ಲ.... ಕೊನೆ ಪಕ್ಷ ನನ್ನನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂದು ತಿಳಿಯುತ್ತದೆ ಮತ್ತು ಹೊರ ರಾಜ್ಯಗಳಿಂದ ನಾಯಕನಟಿಯರನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಕೂಡ" ಎನ್ನುತ್ತಾರೆ.
ಎಲ್ಲಿ ತಪ್ಪಾಗುತ್ತಿದೆ ಎಂಬುದರ ಬಗ್ಗೆ ಬೆರಳು ತೋರಿಸಲು ಸಾಧ್ಯವಿಲ್ಲ ಎನ್ನುವ ನಟಿ "ಏನು ತೊಂದರೆ ಎಂದು ತಿಳಿಯುತ್ತಿಲ್ಲ. ನಾನು ೧೦೦ ಪ್ರತಿಶತ ನೀಡುತ್ತಿದ್ದೇನೆ ಆದರೆ ಏನೋ ನನ್ನ ವೃತ್ತಿಜೀವನಕ್ಕೆ ಅಡ್ಡಿ ಮಾಡಿದೆ" ಎನ್ನುವ ಅವರು "ನನಗೆ ಒಂಚೂರು ಅದೃಷ್ಟ ಒಲಿಯಬೇಕಿದೆ" ಎನ್ನುತ್ತಾರೆ.
ಸದ್ಯಕ್ಕೆ ಸಂಗೀತ ಕನ್ನಡದಲ್ಲಿ 'ದಯವಿಟ್ಟು ಗಮನಿಸಿ' ಮತ್ತು ತಮಿಳಿನಲ್ಲಿ 'ಆರಂಭಮೆ ಅಟ್ಟಕಸಂ' ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ಹಾಗೆಯೇ ವಿಜಯ್ ರಾಘವೇಂದ್ರ ಜೊತೆಗೆ ನಟಿಸುತ್ತಿರುವ, ಬಹು ವಿಳಂಬವಾಗಿರುವ 'ಕಿಸ್ಮತ್'ಗೆ ಕೂಡ ಬೆಳಕು ಕಾಣಬೇಕಿದೆ.