ಸ್ಟೀವನ್ ಸ್ಪಿಲ್ಬರ್ಗ್-ಪ್ರಕಾಶ್ ರಾಜ್
ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಪ್ರಕಾಶ್ ರಾಜ್ ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್ ಗೆ ಚಿರಪರಿಚಿತ. ರಮೇಶ್ ಅರವಿಂದ್ ಟಿವಿ ವಾಹಿನಿಯೊಂದರಲ್ಲಿ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂರನೇ ಆವೃತ್ತಿಯ ಮೊದಲ ಅತಿಥಿಯಾಗಿ ಪ್ರಕಾಶ್ ಕಾಣಿಸಿಕೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಕಾಶ್ ತಮ್ಮ ಸುದೀರ್ಘ ಪಯಣವನ್ನು ವಿವರಿಸಿ ತಮ್ಮ ಗೆಳೆಯರು ಸಹೋದ್ಯೋಗಿಗಳೊಂದಿಗಿನ ಸಂಬಂಧವನ್ನು ಹಂಚಿಕೊಳ್ಳಲಿದ್ದಾರೆ. ಇದರ ಜೊತೆಗೆ ಮತ್ತೊಂದು ವಿಶೇಷ ಇದೆ. ಅದೇನೆಂದರೆ ಹಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್ ಜೊತೆಗೆ ಅವರು ನಡೆಸಲಿರುವ ವಿಡಿಯೋ ಚಾಟ್ ಕೂಡ ಈ ಕಾರ್ಯಕ್ರಮದ ಭಾಗವಾಗಿ ಚಿತ್ರೀಕರಣಗೊಂಡಿದೆ.
ಇದರ ಬಗ್ಗೆ ಮಾತನಾಡಿದ ಪ್ರಕಾಶ್ ಬಾಲ್ಯದಿಂದಲೂ ಸ್ಪಿಲ್ಬರ್ಗ್ ಅಭಿಮಾನಿ ನಾನೆಂದು ತಿಳಿಸುತ್ತಾರೆ. ಸ್ಪಿಲ್ಬರ್ಗ್ ಐದು ವರ್ಷದ ಕೆಳಗೆ ಅನಿಲ್ ಅಂಬಾನಿ ಮನೆಗೆ ಭೇಟಿ ನೀಡಿದ್ದಾಗ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದನ್ನು ನೆನಪಿಸಿಕೊಳ್ಳುವ ನಟ, ಅವರೊಂದಿಗಿನ ಭೇಟಿ ಅದ್ಭುತವಾಗಿತ್ತು. ಖ್ಯಾತ ನಿರ್ದೇಶಕರಾದ ಅವರಿಗೆ ನನ್ನ ೨೦೦೮ ರ 'ಕಾಂಚೀವರಂ' ಸಿನೆಮಾ ಬಗ್ಗೆ ತಿಳಿದಿತ್ತು ಎಂದು ನೆನಪಿನ ಸುರಳಿಯನ್ನು ಬಿಚ್ಚಿಡುತ್ತಾರೆ.
"ಅವರು (ಅನಿಲ್ ಅಂಬಾನಿ) ನಿರ್ದೇಶಕರಿಗೆ ಔತಣ ಕೂಟ ಆಯೋಜಿಸಿದ್ದರು. ದಕ್ಷಿಣ ಭಾರತದ ಚಿತ್ರರಂಗದಿಂದ ನನ್ನನ್ನು ಮತ್ತು ಕಮಲ ಹಾಸನ್ ಅವರನ್ನು ಆಹ್ವಾನಿಸಲಾಗಿತ್ತು" ಎಂದು ತಿಳಿಸುವ ಪ್ರಕಾಶ್ "ರಿಲಾಯನ್ಸ್ ವಿತರಣೆ ಮಾಡಿದ್ದ 'ಸಿಂಗಂ' ಸಿನೆಮಾದಲ್ಲಿ ನಾನು ಕೆಲಸ ಮಾಡಿದ್ದೆ. ನಾನೊಬ್ಬ ಆಸಕ್ತಿದಾಯಕ ನಟ ಮತ್ತು ಅತ್ಯುತ್ತಮ ಹಾಸ್ಯನಟ ಎಂದು ಸ್ಪಿಲ್ಬರ್ಗ್ ಅವರಿಗೆ ಟೀನಾ ಅಂಬಾನಿ ಪರಿಚಯ ಮಾಡಿಕೊಟ್ಟರು.
ಆಗ ಸ್ಟೀವನ್ ನನ್ನೆಡೆ ನೋಡಿ, ಅವರ ಕಣ್ಣಲ್ಲಿ ಸಾಕಷ್ಟು ನೋವು ಕಾಣಿಸುತ್ತಿದೆ ನನಗೆ ಎಂದರು. ಮತ್ತು ಸಿನೆಮಾವೊಂದರಲ್ಲಿ ನೇಕಾರನ ಪಾತ್ರ ನಿರ್ವಹಿಸಿದ್ದೀರಲ್ಲವೇ ಎಂದು ಕೇಳಿದರು. ಅದಕ್ಕೆ ನಾನು ಹೌದು 'ಕಾಂಚೀವರಂ' ಸಿನೆಮಾದಲ್ಲಿ ಎಂದೇ. ಅದನ್ನು ಅವರು ಟೊರೊಂಟೊ ಸಿನಿಮೋತ್ಸವದಲ್ಲಿ ನೋಡಿದ್ದರು ಎಂದು ನನಗೆ ತಿಳಿಯಿತು. ನನ್ನ ಕಣ್ಣಿನ ಭಾವನೆಯಿಂದ ಆ ಸಿನೆಮಾವನ್ನು ಅವರು ನೆನೆದರು. ಇದು ನನಗೆ ಮರೆಯಾಲಾರದ ಕ್ಷಣ" ಎನ್ನುತ್ತಾರೆ.
ಈಗ ಮತ್ತೆ ವಿಡಿಯೋ ಚಾಟ್ ಮೂಲಕ ಸ್ಪಿಲ್ಬರ್ಗ್ ಜೊತೆಗೆ ಮಾತನಾಡುವ ಅವಕಾಶ ದೊರೆಯಿತು ಎನ್ನುವ ಪ್ರಕಾಶ್ "ನಾನು ಸ್ಪಿಲ್ಬರ್ಗ್ ಅವರನ್ನು ಭೇಟಿ ಮಾಡಿದ ವಿಷಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ನಿರ್ಮಾಪಕರಿಗೆ ತಿಳಿದು ಅವರು ಸ್ಪಿಲ್ಬರ್ಗ್ ಅವರ ಜೊತೆಗೆ ಸಂಪರ್ಕ ಸಾಧಿಸಿದ್ದಾರೆ. ಅವರು ನನಗೆ ಸಂದೇಶ ಕಳುಹಿಸಿದ್ದಾರೆ ಮತ್ತು ಆಗ ನನ್ನ ಕಣ್ಣಲ್ಲಿ ನೀರೂರಿತು. ಇಂದು ನಂಬಲಾಗದ ಕ್ಷಣವಾಗಿತ್ತು" ಎನ್ನುತ್ತಾರೆ.
ಈ ವಿಡಿಯೋ ಸಂದೇಶದಲ್ಲಿ ಸ್ಪಿಲ್ಬರ್ಗ್ ನನ್ನನ್ನು ನಟ ಎಂದಷ್ಟೇ ಕರೆಯದೆ "ಪ್ರತಿಭೆ, ಕೊಡುಗೆದಾರ ಮತ್ತು ಜಾಗತಿಕ ಸಾಮುದಾಯಿಕ ಕಲಾವಿದ ಎಂದಿದ್ದಾರೆ. ಗಡಿಗಳನ್ನು ಮೀರಿದ ದಂತಕಥೆ ನಿಮ್ಮ ಬಗ್ಗೆ ಪ್ರಶಂಸಿಸಿದಾಗ ಕಣ್ಣಲ್ಲಿ ನೀರು ಬರುತ್ತದೆ . ನಾನು ವಿನೀತನಾಗಿದ್ದೇನೆ. ಈ ಕ್ಷಣಗಳನ್ನು ಎಂದಿಗೂ ಮರೆಯುವುದಿಲ್ಲ" ಎನ್ನುತ್ತಾರೆ ಪ್ರಕಾಶ್ ರಾಜ್.