ಬೆಂಗಳೂರು: ದರ್ಶನ್ ಅಭಿನಯದ 'ಚಕ್ರವರ್ತಿ' ಸಿನೆಮಾದ ಟ್ರೇಲರ್ ಬಿಡುಗಡೆ ಯುಗಾದಿ ಹಬ್ಬದಂದು ನೆರವೇರಲಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಕೆಲವು ವಿವರಗಳನ್ನು ತಿಳಿಸಿರುವಂತೆ, ಈ ಎರಡು ನಿಮಿಷದ ಟ್ರೇಲರ್ ನಲ್ಲಿ ಯಾವುದೇ ಸಂಭಾಷಣೆ ಇರುವುದಿಲ್ಲವಂತೆ. ಸಿನೆಮಾದ ಎಲ್ಲ ನಟರನ್ನು ಒಳಗೊಂಡ ದೃಶ್ಯಗಳ ಸಮ್ಮಿಲನ ಈ ಟ್ರೇಲರ್ ನಲ್ಲಿ ಕಾಣಬಹುದು ಎನ್ನುತ್ತದೆ ಚಿತ್ರತಂಡ.
"ದರ್ಶನ್ ಅವರ ಮೂರೂ ಛಾಯೆಗಳ ದರ್ಶನ ಸಿಗಲಿದೆ. ಸಿನೆಮಾದಲ್ಲಿ ಅವರು ಭೂಗತ ದೊರೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಭೂಗತ ಲೋಕದ ಇತರ ಪಾತ್ರಗಳು ಟ್ರೇಲರ್ ನಲ್ಲಿ ಅನಾವರಣಗೊಳ್ಳಲಿವೆ" ಎಂದು ಚೊಚ್ಚಲ ನಿರ್ದೇಶಕ ಚಿಂತನ್ ಹೇಳಿದ್ದಾರೆ. "೨೦೦ ಶಾಟ್ ಗಳೊಂದಿಗೆ ಈ ಟ್ರೇಲರ್ ಅನ್ನು ಸಂಕಲಿಸಿದ್ದೇವೆ. ಇದರಲ್ಲಿ ಕ್ರ್ಯುಸ್, ಜೆಸ್ಕಿ, ಹೆಲಿಕ್ಯಾಪ್ಟರ್ ಎಲ್ಲವು ಕಾಣಿಸಿಕೊಳ್ಳಲಿದ್ದು, ಸಂಗೀತ, ಗ್ರಾಫಿಕ್ಸ್ ಎಫೆಕ್ಟ್ಸ್, ಹಿನ್ನಲೆ ಸಂಗೀತ ಎಲ್ಲದರ ಸುಳಿವು ಸಿಗಲಿದೆ" ಎನ್ನುತ್ತಾರೆ.
ದರ್ಶನ್ ಅವರ ಸಿನೆಮಾಗಳಲ್ಲಿ ಈ ರೀತಿಯ ಟ್ರೇಲರ್ ಬಂದಿರುವುದು ಇದೆ ಮೊದಲು ಎನ್ನುವ ಅವರು "ನಾನು ಬರಹಗಾರನಾಗಿ, ಕೇವಲ ದೃಶ್ಯಗಳೇ ಟ್ರೇಲರ್ ನಲ್ಲಿ ಮಾತನಾಡುವಂತೆ ಮಾಡಿದ್ದೇನೆ" ಎನ್ನುತ್ತಾರೆ ಚಿಂತನ್.
ಈ ವಾರ ಸಿನೆಮಾ ಸೆನ್ಸಾರ್ ಮಂಡಳಿ ಎದುರು ಬರಲಿದ್ದು, ಏಪ್ರಿಲ್ ೧೪ ಕ್ಕೆ 'ಚಕ್ರವರ್ತಿ' ಬಿಡುಗಡೆಯಾಗಲಿದೆಯಂತೆ. ಸಿದ್ಧಾಂತ್ ನಿರ್ಮಿಸಿರುವ ಈ ಸಿನೆಮಾ ತೂಗುದೀಪ ಡಿಸ್ಟ್ರಿಬ್ಯುಟರ್ ಬ್ಯಾನರ್ ಅಡಿ ಮಲ್ಲಿಕಾರ್ಜುನ್ ಮತ್ತು ದಿನಕರ್ ವಿತರಣೆ ಮಾಡಲಿದ್ದಾರೆ.
'ಸಾರಥಿ' ನಂತರ ನಟಿ ದೀಪಾ ಸನ್ನಿಧಿ ಎರಡನೇ ಬಾರಿಗೆ 'ಚಕ್ರವರ್ತಿ'ಯಲ್ಲಿ ದರ್ಶನ್ ಎದುರು ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಕೆ ಎಸ್ ಚಂದ್ರಶೇಖರ್ ಅವರ ಸಿನೆಮ್ಯಾಟೋಗ್ರೋಫಿ ಚಿತ್ರಕ್ಕಿದೆ.
ಆದಿತ್ಯ, ಸೃಜನ್ ಲೋಕೇಶ್, ಕುಮಾರ್ ಬಂಗಾರಪ್ಪ, ಯಶ್, ಆದಿ ಲೋಕೇಶ್, ಶರತ್ ಲೋಹಿತಾಶ್ವ ಮತ್ತು ಚಾರುಲತಾ ತಾರಾಗಣದ ಭಾಗವಾಗಿದ್ದಾರೆ.