ಬೆಂಗಳೂರು: ಚೇತನ್ ಕುಮಾರ್ ನಿರ್ದೇಶನದಲ್ಲಿ ನಟ ನಿಖಿಲ್ ಕುಮಾರ್ ತಮ್ಮ ಎರಡನೇ ಸಿನೆಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಚನ್ನಂಬಿಕ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಈ ಸಿನೆಮಾ ನಿರ್ಮಾಣಗೊಳ್ಳಲಿದ್ದು, ಏಪ್ರಿಲ್ ೨ ರಂದು ಮುಹೂರ್ತ ನೆರವೇರಲಿದೆಯಂತೆ. ಅಂದೇ ಹೆಚ್ಚಿನ ವಿವರಗಳು ತಿಳಿಯಲಿವೆ.
ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿದ್ದ 'ಜಾಗ್ವಾರ್' ಸಿನೆಮಾ ಮೂಲಕ ಪಾದಾರ್ಪಣೆ ಮಾಡಿದ್ದ ನಿಖಿಲ್ ಕುಮಾರ್, ಎರಡನೇ ಚಿತ್ರದಲ್ಲಿ ಕನ್ನಡ ನಿರ್ದೇಶಕನ ಜೊತೆಗೆ ಕೆಲಸ ಮಾಡುವುದಾಗಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಹಲವು ಸ್ಕ್ರಿಪ್ಟ್ ಗಳನ್ನು ಓದಿದ ಮೇಲೆ ಈಗ ಚೇತನ್ ಅವರ ಕಥೆಯನ್ನು ಅಂತಿಮಗೊಳಿಸಿದ್ದಾರೆ.
ಚಿತ್ರತಂಡದ ಸದಸ್ಯರೊಬ್ಬರು ತಿಳಿಸುವಂತೆ, ಇನ್ನು ಹೆಸರಿದ ಈ ಚಿತ್ರ ಕೂಡ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದೆಯಂತೆ. ಈಗ ತಂತ್ರಜ್ಞರ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸುವ ಅವರು "ಸದ್ಯಕ್ಕೆ ಸಂಗೀತಕ್ಕೆ ವಿ ಹರಿಕೃಷ ಮತ್ತು ಛಾಯಾಗ್ರಹಣಕ್ಕೆ ಶ್ರೀಶ ಕುಡುವಲ್ಲಿ ಅವರನ್ನು ಅಂತಿಮಗೊಳಿಸಲಾಗಿದೆ. ದೀಪು ಸಂಕಲನ, ಈ ಹರ್ಷ ನೃತ್ಯ ನಿರ್ದೇಶನ ಮತ್ತು ರವಿ ಸಂತೇಹೈಕ್ಳು ಕಲಾ ನಿರ್ದೇಶಕರಾಗಿ ಸೇರಲಿದ್ದಾರೆ" ಎಂದು ತಿಳಿಸುತ್ತಾರೆ.
ಈಮಧ್ಯೆ ಹೊಸ ನಾಯಕನಟಿಯ ಆಯ್ಕೆಗಾಗಿ ಸಿನೆಮಾತಂಡ ಶೋಧದಲ್ಲಿದೆ. ಇದಕ್ಕಾಗಿ ಆಡಿಷನ್ ಕರೆದಿದ್ದು, ೬೦೦ ಅರ್ಜಿಗಳನ್ನು ಸ್ವೀಕರಿಸಿರುವುದಾಗಿ ಮೂಲಗಳು ತಿಳಿಸಿವೆ. "ಸಾಂಪ್ರದಾಯಿಕ ನೋಟವಿರುವ ಹುಡುಗಿಯ ಶೋಧದಲ್ಲಿದ್ದೇವೆ. ಕನ್ನಡ ಭಾಷೆಯನ್ನು ಬಲ್ಲ ನಟಿಯಾಗಿರಬೇಕು ಹಾಗು ಹೊಸಮುಖವನ್ನು ಆಯ್ಕೆ ಮಾಡಲಾಗುತ್ತದೆ" ಎಂದು ತಿಳಿಸುತ್ತವೆ ಮೂಲಗಳು.