ಬೆಂಗಳೂರು: ನಾನೂ ಜೀವಂತವಾಗಿದ್ದು, ಪ್ರಸ್ತುತ ಕುಟುಂಬ ಸದಸ್ಯರೊಂದಿಗೆ ಶೃಂಗೇರಿಯಲ್ಲಿದ್ದೇನೆಂದು ಹೇಳುವ ಮೂಲಕ ಇತ್ತೀಚೆಗಷ್ಟೇ ಹಬ್ಬಿದ್ದ ವಂದತಿಗಳಿಗೆ ನಟಿ ರೇಖಾ ಕೃಷ್ಣಪ್ಪ ಅವರು ತೆರೆ ಎಳೆದಿದ್ದಾರೆ.
ಇಂದು ಬೆಳಿಗ್ಗೆ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು. ತಮಿಳುನಾಡಿನ ಮಾಧ್ಯಮಗಳು ರೂಪದರ್ಶಿ ರೇಖಾ ಸಿಂಧು ಅವರ ಭಾವಚಿತ್ರ ಹಾಕುವ ಬದಲು ನಟಿ ರೇಖಾ ಕೃಷ್ಣಪ್ಪ ಅವರ ಭಾವಚಿತ್ರಗಳನ್ನು ಹಾಕಿ ಮೃತಪಟ್ಟಿದ್ದಾರೆಂದು ವರದಿಗಳನ್ನು ಮಾಡಿದ್ದವು. ತಮಿಳಿನ ಗಾಯತ್ರಿ ಧಾರವಾಹಿಯಿಲ್ಲಿ ರೇಖಾ ಕೃಷ್ಣಪ್ಪ ಅವರು ನಟಿಸಿದ್ದ ಭಾವಚಿತ್ರಗಳನ್ನು ಹಾಕಿ ಗೊಂದಲವನ್ನು ಮೂಡಿಸಿದ್ದವು.
ಈ ಕುರಿತ ಸುದ್ದಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸ್ ಅಫ್ ಗಳಲ್ಲಿ ಹರಿದಾಡತೊಡಗಿದ್ದವು.
ವದಂತಿಗಳು ಹರಡಿರುವ ಹಿನ್ನಲೆಯಲ್ಲಿ ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ರೇಖಾ ಕೃಷ್ಣಪ್ಪ, ನಾನು ಜೀವಂತವಾಗಿಯೇ ಇದ್ದೇನೆ. ನಾನು ಚೆನ್ನಾಗಿದ್ದೇನೆ. ಪ್ರಸ್ತುತ ಶೃಂಗೇರಿಯ ಶಾರದಾ ಪೀಠ ದೇವಸ್ಥಾನದಲ್ಲಿದ್ದೇನೆ. ರೇಖಾ ಸಿಂಧು ಎಂಬ ಹೆಸರಿನ ಕಿರುತೆರೆ ನಟಿ ಸಾವನ್ನಪ್ಪಿದ ಬಳಿಕ ನನಗೆ ಸಾಕಷ್ಟು ಕರೆಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದಾರೆ.