ಬೆಂಗಳೂರು: ಈ ವರ್ಷ ಗಣೇಶ್ ನಟಿಸಲಿರುವ ಸಿನೆಮಾಗಳ ಪಟ್ಟಿ ಉದ್ದವಿದೆ. 'ಪಟಾಕಿ'ಯಿಂದ ಪ್ರಾರಂಭವಾಗಿ, ಯೋಗರಾಜ್ ಭಟ್ ಅವರ 'ಮುಗುಳುನಗೆ' ಮತ್ತು 'ಗಾಳಿಪಟ ೨', ಪ್ರಶಾಂತ್ ರಾಜ್ ಅವರ 'ಆರೆಂಜ್' ಕೂಡ ಸಾಲಿನಲ್ಲಿದು ಪವನ್ ಕುಮಾರ್ ನಿರ್ದೇಶನದ ನಿಕೋಟಿನ್ ಬಗೆಗಿನ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.
ಈಮಧ್ಯೆ ಆಪ್ತಮಿತ್ರ ಖ್ಯಾತಿಯ ಪಿ ವಾಸು ಅವರ ನಿರ್ದೇಶನದಲ್ಲಿಯೂ ಗಣೇಶ್ ನಾಯಕನಟನಾಗಲಿದ್ದಾರೆ. ಶಿವರಾಜ್ ಕುಮಾರ್ ನಟಿಸಿದ್ದ 'ಶಿವಲಿಂಗ' ವಾಸು ಕನ್ನಡದಲ್ಲಿ ನಿರ್ದೇಶಿಸಿದ ಇತ್ತೀಚಿನ ಚಿತ್ರ. ೨೦೧೬ ರಲ್ಲಿ ಬಿಡುಗಡೆ ಕಂಡ ಈ ಚಿತ್ರ ವಾಣಿಜ್ಯ ಯಶಸ್ಸು ಕಂಡಿತ್ತು. ಇದೆ ಸಿನೆಮಾದ ತಮಿಳು ರಿಮೇಕ್ ಏಪ್ರಿಲ್ ೨೦೧೭ ರಲ್ಲಿ ಬಿಡುಗಡೆಯಾಗಿತ್ತು. ಅಲ್ಲಿ ರಾಘವ ಲಾರೆನ್ಸ್ ನಟಿಸಿದ್ದರು.
ಗಣೇಶ್ 'ಆರೆಂಜ್' ಸಿನೆಮಾ ಮುಗಿಸಿದ ಮೇಲೆ, ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ, ವಾಸು ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. "ಗಣೇಶ್ ಜೊತೆಗಿನ ಸಿನೆಮಾ ಚರ್ಚಿಸಲಾಗುತ್ತಿದೆ. ನಾನು ಅವರನ್ನು ಎರಡು ಬಾರಿ ಭೇಟಿ ಮಾಡಿದ್ದೇನೆ" ಎನ್ನುವ ನಿರ್ದೇಶಕ "ಅಧಿಕೃತ ಘೋಷಣೆಗೂ ಮುಂಚಿತವಾಗಿ ನಿರ್ಮಾಪಕ ಮತ್ತು ದಿನಾಂಕಗಳನ್ನು ಅಂತಿಮಗೊಳಿಸಬೇಕಿದೆ" ಎನ್ನುತ್ತಾರೆ.