ಬೆಂಗಳೂರು: ಶಿವರಾಜ್ ಕುಮಾರ್ ನಾಯಕನಟನಾಗಿ ನಟಿಸಿರುವ ಯೋಗಿ ಜಿ ರಾಜ್ ನಿರ್ದೇಶನದ 'ಬಂಗಾರ S/O ಬಂಗಾರದ ಮನುಷ್ಯ' ಸಿನೆಮಾಗೆ ಸೆನ್ಸಾರ್ ಮಂಡಳಿ 'ಯು/ಎ ಪ್ರಮಾಣಪತ್ರ' ನೀಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ನಾಯಕನಟಿಯಾಗಿರುವ ವಿದ್ಯಾ ಪ್ರದೀಪ್ ಈ ಸಂಗತಿಯ ಬಗ್ಗೆ ಉತ್ಸುಕರಾಗಿದ್ದಾರೆ.
ಇದು ೨೦೧೭ ರಲ್ಲಿ ನಟಿಯ ಮೊದಲ ಸಿನೆಮಾ ಆಗಿದ್ದು, ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ ಕೂಡ. ಸುಮಾರು ೧೧ ಸಿನೆಮಾಗಳಲ್ಲಿ ನಟಿಸಿರುವ ವಿದ್ಯಾ, ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ಅನುಭವ 'ಬಂಗಾರ..' ಸಿನೆಮಾದ್ದು ಎನ್ನುತ್ತಾರೆ. "ಇಲ್ಲಿನ ಅನುಭವ ಆಹ್ಲಾದಕರವಾಗಿತ್ತು. ಇದರ ನಂತರ ಕನ್ನಡ ಚಿತ್ರರಂಗದಲ್ಲಿ ಎಷ್ಟು ಸಾಧ್ಯವೋ ಅಷ್ಟು ತೊಡಗಿಸಿಕೊಳ್ಳಲು ಆಸೆಯಾಗಿದೆ" ಎನ್ನುತ್ತಾರೆ.
ಮೇರುನಟ ರಾಜಕುಮಾರ್ ಅವರ 'ಬಂಗಾರದ ಮನುಷ್ಯ' ಸಿನೆಮಾದಲ್ಲಿನ ಭಾರತಿ ವಿಷ್ಣುವರ್ಧನ್ ಅವರ ಪಾತ್ರಕ್ಕೂ ಸದರಿ ಸಿನೆಮಾದ ವಿದ್ಯಾ ಅವರ ಪಾತ್ರಕ್ಕೂ ಹೋಲಿಕೆಗಳಿವೆ ಎನ್ನಲಾಗುತ್ತಿದ್ದು ಇದರ ಬಗ್ಗೆ ಪ್ರತಿಕ್ರಿಯಿಸುವ ನಟಿ "'ಬಂಗಾರ..' ಸಂಪೂರ್ಣ ಮನರಂಜನಾ ಚಿತ್ರ ಎಂದಷ್ಟೇ ಹೇಳಬಲ್ಲೆ. ಹಾಗೆಯೇ ರೈತರು ಎದುರಿಸುವ ತೊಂದರೆಗಳ ಬಗ್ಗೆ ಕೂಡ ಸಿನೆಮಾ ಚರ್ಚಿಸಲಿದೆ. ಪಾತ್ರಗಳ ಹೋಲಿಕೆ ಏನು ಇಲ್ಲ" ಎನ್ನುತ್ತಾರೆ.
ಭಾಷೆ ಗೊತ್ತಿಲ್ಲದ್ದು ಚಿತ್ರೀಕರಣಕ್ಕೆ ತುಸು ತೊಡಕಾಯಿತು ಎನ್ನುವ ನಟಿ, ಆದರೆ ರೈತರ ಜೊತೆಗೆ ಮಾತನಾಡುವುದಕ್ಕೆ ಯಾವುದೇ ತೊಂದರೆಗಳಾಗಲಿಲ್ಲ ಎನ್ನುತ್ತಾರೆ. "ಅವರು ಬಹಳ ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಅವರ ಮನೆಗಳಲ್ಲಿಯೇ ತಯಾರಿಸುತ್ತಿದ್ದ ರಾಗಿ ಮುದ್ದೆ ಮತ್ತು ಕೋಳಿ ಸಾರು ಪ್ರತಿ ರಾತ್ರಿ ಊಟಕ್ಕೆ ಬಡಿಸುತ್ತಿದ್ದರು. ೨೫ ದಿನ ನಡೆದ ಚಿತ್ರೀಕರಣದಲ್ಲಿ ಅವರದ್ದು ತುಂಬು ಹೃದಯದ ಆತಿಥ್ಯ. ನಮ್ಮನ್ನು ಕುಟುಂಬದ ಹಾಗೆ ನೋಡಿಕೊಂಡರು" ಎನ್ನುತ್ತಾರೆ.
"ರೈತರು ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಮತ್ತು ನಮ್ಮ ದೇಶದ ಹೆಮ್ಮೆ ಅವರು. ಬರ, ಬೆಳೆ ನಾಶ ಮತ್ತು ಭೂಕಬಳಿಕೆ ಇಂತಹ ಸಮಸ್ಯೆಗಳಿಗೆ ಅವರು ತುತ್ತಾಗಿರಬೇಕಾದರೆ, ಅವರಿಗಾಗಿ ನಾವು ಎದ್ದು ನಿಲ್ಲಬೇಕು. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ಅದು ಇಡೀ ಕುಟುಂಬಕ್ಕೆ ತೊಂದರೆ ಸೃಷ್ಟಿಸುತ್ತದೆ ಏಕೆಂದರೆ ಇಡೀ ಕುಟುಂಬ ಅವರನ್ನು ಅವಲಂಬಿಸಿರುತ್ತದೆ. ನಾವು ಉಪವಾಸ ಮಲಗದಂತೆ ನಮ್ಮ ರೈತರು ಶ್ರಮವಹಿಸಿ ದುಡಿಯುತ್ತಾರೆ. ನಮ್ಮ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಆಗಿರುವವರೇ ನಮ್ಮ ರೈತರು ಇದಕ್ಕಾಗಿ ನಾನು ಹೆಮ್ಮೆಯ ಭಾರತೀಯಳು. ಅವರಿಗೆ ಧನ್ಯವಾದ ಹೇಳಿ ಅವರ ಪರವಾಗಿ ಮಾತನಾಡಲು ನಾನು ಇಚ್ಛಿಸುತ್ತೇನೆ" ಎನ್ನುತ್ತಾರೆ ವಿದ್ಯಾ.