ಸಿನಿಮಾ ಸುದ್ದಿ

ಸೂಫಿ ಮತ್ತು ಭಕ್ತಿ ಚಳುವಳಿಯ ಬಗ್ಗೆ ಸಾಕ್ಷ್ಯಚಿತ್ರ ನಿರ್ದೇಶಿಸಲಿರುವ ಬಾಂಗ್ಲಾದೇಶಿ ಕಾರ್ಯಕರ್ತ

Guruprasad Narayana
ಕೋಲ್ಕತ್ತಾ: ಜಾತ್ಯಾತೀತ ಮಾನವೀಯತೆ ಮತ್ತು ಧಾರ್ಮಿಕ ಸೌಹಾರ್ದದ ಬಗೆಗಿನ ಸಂದೇಶವನ್ನು ಕೊಂಡೊಯ್ಯಲು, ಬಾಂಗ್ಲಾ ದೇಶದ ಲೇಖಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಶಾರೀಯರ್ ಕಬೀರ್ ಐದು ರಾಷ್ಟ್ರಗಳಲ್ಲಿನ ಸೂಫಿ ಮತ್ತು ಭಕ್ತಿ ಚಳುವಳಿಯನ್ನು ಅಧ್ಯಯನ ಮಾಡಿ ಸಾಕ್ಷ್ಯಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. 
"ಸೂಫಿ ಮಾರ್ಗ ಟರ್ಕಿಯಲ್ಲಿ ಪ್ರಾರಂಭವಾಗಿ ನಂತರ ಇರಾನ್, ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶದಲ್ಲಿ ಪಸರಿಸಿತು. ಈ ಮಾರ್ಗದಲ್ಲಿ ಅದು ಹಿಂದೂಧರ್ಮ, ಬೌದ್ಧ ಧರ್ಮ ಮತ್ತು ಸಾಕಷ್ಟು ಪ್ರಾದೇಶಿಕ ಸಂಪ್ರದಾಯಗಳಿಂದ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ಬೃಹತ್ತಾಗಿ ಬೆಳೆಯಿತು" ಎಂದು ಯುದ್ಧ ಅಪರಾಧಗಳ ಸಂಶೋಧನಾಕಾರ ಹೇಳಿದ್ದಾರೆ. 
"ನಾನು ಜಾತ್ಯತೀತ ಮಾನವೀಯತೆಯನ್ನು ಮುಖ್ಯವಾಗಿ ತೋರಿಸಬೇಕೆಂದಿದ್ದೇನೆ. ವಿಶ್ವದಾದ್ಯಂತ ಧಾರ್ಮಿಕ ತೀವ್ರವಾದ ತಲೆಯೆತ್ತಿದೆ. ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ನಾವು ಧಾರ್ಮಿಕ ತೀವ್ರವಾದದ ವಿರುದ್ಧ ಹೋರಾಟ ಮಾಡುತ್ತಿದ್ದರೂ ಅದನ್ನು ಧಾರ್ಮಿಕವಾಗಿಯೂ ಎದುರಿಸಬೇಕು. ಒಬ್ಬನನ್ನು ಕೊಲ್ಲಲು ಯಾವ ಧರ್ಮವು ಬೋಧಿಸುವುದಿಲ್ಲ" ಎಂದು ಅವರು ವಿವರಿಸಿದ್ದಾರೆ. 
ಪಾಕಿಸ್ತಾನದಲ್ಲಿ ಕಬೀರ್ ಆಗಲೇ ಸಾಕಷ್ಟು ಚಿತ್ರೀಕರಣ ಮುಗಿಸಿದ್ದಾರೆ. 
"ಬಲೂಚಿಸ್ತಾನದಲ್ಲಿ ಹಿಂಗ್ಲಾಜ್ ಹಿಂದೂಗಳ ಪುಣ್ಯ ಕ್ಷೇತ್ರ. ಅಲ್ಲಿ ಮುಸ್ಲಿಮರು ಪೂಜೆ ಮಾಡುವುದನ್ನು ನೋಡಿ ಆಶ್ಚರ್ಯಚಕಿತನಾದೆ. ಹಲವು ವರ್ಷಗಳಿಂದ ಇರುವ ಇಂತಹ ಧಾರ್ಮಿಕ ಸೌಹಾರ್ದತೆಯನ್ನು ಸೆರೆಹಿಡಿದು ತೋರಿಸಲಿದ್ದೇನೆ" ಎಂದು ಕಬೀರ್ ಹೇಳಿದ್ದಾರೆ. 
"ಈ ಯೋಜನೆ ಒಂದು ವರ್ಷ ಹಿಡಿಯಲಿದೆ" ಎಂದು ಕಬೀರ್ ಹೇಳಿದ್ದಾರೆ. 
SCROLL FOR NEXT