'ತೇಜು' ಸಿನೆಮಾದ ಮೂಲಕ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ. ಈ ಸಿನೆಮಾದಲ್ಲಿ ಅವರು ೮೦ ವರ್ಷದ ಅಜ್ಜಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಅವರು ಸದ್ಯಕ್ಕೆ 'ಮಣಿಕರ್ಣಿಕಾ- ದ ಕ್ವೀನ್ ಆಫ್ ಝಾನ್ಸಿ' ಸಿನೆಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಇದರ ನಂತರ ತಮ್ಮ ನಿರ್ದೇಶನದ ಹೊಸ ಸಿನೆಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಹಿಮಾಲಯದಲ್ಲಿ ಚಿತ್ರೀಕರಣಗೊಳ್ಳಲಿರುವ 'ತೇಜು' ಮುಂದಿನ ವರ್ಷದ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದೆ.
'ತನು ವೆಡ್ಸ್ ಮನು' ಮತ್ತು 'ಸಿಮ್ರಾನ್' ನಿರ್ಮಾಪಕ ಶೈಲೇಶ್ ಸಿಂಗ್ ಜೊತೆಗೆ, ನೂತನವಾಗಿ ಚಾಲನೆಗೊಂಡ ಕಂಗನಾ ಅವರ ಬ್ಯಾನರ್ 'ಮಣಿಕರ್ಣಿಕಾ ಫಿಲ್ಮ್ಸ್' ಅಡಿಯಲ್ಲಿ ಈ ಸಿನೆಮಾ ನಿರ್ಮಾಣಗೊಳ್ಳಲಿದೆ.
ತಾವು ೮೦ ವರ್ಷದ ಮುದುಕಿಯ ಪಾತ್ರವನ್ನು ನಿರ್ವಹಿಸುತ್ತಿರುವುದರ ಬಗ್ಗೆ ಹೇಳಿಕೆಯಲ್ಲಿ ಧೃಢೀಕರಿಸಿರುವ ಕಂಗನಾ "ಇದು ಹಿರಿಯ ವ್ಯಕ್ತಿಗಳ ಬಗೆಗಿನ ಸಿನೆಮಾ" ಎಂದಿದ್ದಾರೆ.