ಬೆಂಗಳೂರು: ಸಿನೆಮಾಗಳಲ್ಲಿ ಪುನೀತ್ ರಾಜಕುಮಾರ್ ಅವರ ನಟನೆ ಒಂದು ತೂಕವಾದರೆ ಅವರ ನೃತ್ಯ ಇನ್ನೊಂದು ತೂಕ. ನೃತ್ಯನಿರ್ದೇಶಕನಾಗಿದ್ದು ಈಗ ನಿರ್ದೇಶಕನಾಗಿರುವ ಹರ್ಷ, ಪುನೀತ್ ಅವರ ನೃತ್ಯಕ್ಕೆ ನಿರ್ದೇಶನ ಮಾಡಿದ ಮೇಲಂತೂ ಅದಕ್ಕೆ ಇನ್ನಷ್ಟು ಮೆರುಗು ಬರದೆ ಇರದು. ಈಗ ಪುನೀತ್ ಅಭಿನಯಾದ 'ಅಂಜನೀಪುತ್ರ' ನಿರ್ದೇಶಿಸುತ್ತಿರುವ ಹರ್ಷ, ಪರಿಚಯ ಹಾಡಿನ ನೃತ್ಯವನ್ನು ನಿರ್ದೇಶಿಸಿದ್ದಾರೆ.
ಸಿನೆಮಾದ ಸ್ಟಿಲ್ ಗಳನ್ನು ಹಂಚಿಕೊಂಡಿರುವ ಹರ್ಷ "ಹೀರೊ, ಹೀರೋಯಿನ್ ಅಥವಾ ಆಕ್ಷನ್ ಒಳಗೊಂಡ ಸ್ಟಿಲ್ ಗಳನ್ನೂ ಮೊದಲು ಬಿಡುಗಡೆ ಮಾಡುವುದು ಚಿತ್ರೋದ್ಯಮದ ಬಳುವಳಿ. ನಾನು ಸಿನೆಮಾದ ಪರಿಚಯ ಹಾಡಿನ ಬಗ್ಗೆ ಮಾತನಾಡುವುದರ ಮೂಲಕ ಪ್ರಾರಂಭಿಸಿದ್ದೇನೆ" ಎನ್ನುತ್ತಾರೆ. ಈ ಹಾಡಿಗೆ ಪುನೀತ್ ಜೊತೆಗೆ ಹರಿಪ್ರಿಯಾ ಹೆಜ್ಜೆ ಹಾಕಿದ್ದಾರೆ.
"ಈ ಹಾಡಿನಲ್ಲಿ ನಾಳೆಯೇ ಇಲ್ಲ ಎನ್ನುವ ರೀತಿಯಲ್ಲಿ ಪುನೀತ್ ಕುಣಿದಿದ್ದಾರೆ. ಈ ಹಾಡು ಪ್ರೇಕ್ಷಕರನ್ನು ಹುಚ್ಚೆಚ್ಚು ಕುಣಿಯುವಂತೆ ಮಾಡಲಿದೆ" ಎನ್ನುತ್ತಾರೆ ನಿರ್ದೇಶಕ.
ಈಗ ಸಿನೆಮಾದ ೫೦% ಚಿತ್ರೀಕರಣ ಮುಗಿದಿದ್ದು, ಪುನೀತ್ ರಾಜಕುಮಾರ್ ಸೆಟ್ ಗೆ ಹಿಂತಿರುಗಲು ಚಿತ್ರತಂಡ ಕಾಯುತ್ತಿದೆ. ತಮ್ಮ ತಾಯಿ (ಪಾರ್ವತಮ್ಮ ರಾಜಕುಮಾರ್) ಅನಾರೋಗ್ಯದಿಂದ ಬಳಲುತ್ತಿರುವುದರಿಂದ, ಅವರ ಆರೈಕೆಗೆ ಪುನೀತ್ ತೆರಳಿದ್ದಾರೆ. "ಮುಂದಿನ ವಾರದಿಂದ ಚಿತ್ರೀಕರಣ ಮತ್ತೆ ಪ್ರಾರಂಭವಾಗುವ ಭರವಸೆ ಇದೆ" ಎಂದಿದ್ದಾರೆ ಹರ್ಷ.