ಬೆಂಗಳೂರು: ಜನಪ್ರಿಯ ಕನ್ನಡ ನಟ ಪ್ರೇಮಲೋಕದ ಹರಿಕಾರ ರವಿಚಂದ್ರನ್ ತಮ್ಮ ೫೬ ನೇ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನವನ್ನು ನೆನಪಿನಲ್ಲುಳಿಯುವಂತೆ ಮಾಡಲು ಅವರ ಅಭಿಮಾನಿಗಳು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ, 'ಸೀಜರ್' ಚಿತ್ರತಂಡ ಈ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡಿ ಅವರಿಗೆ ಉಡುಗೊರೆ ನೀಡಲಿದೆಯಂತೆ. ಇದೆ ಸಂದರ್ಭದಲ್ಲಿ ಪುತ್ರ ಮನೋರಂಜನ್ ಅವರ ಚೊಚ್ಚಲ ಚಿತ್ರ 'ಸಾಹೇಬ' ಸಿನೆಮಾದ ಹೊಸ ಟ್ರೇಲರ್ ಕೂಡ ಬಿಡುಗಡೆಯಾಗಲಿದೆ.
ಹಾಗೆಯೇ 'ಸಾಹೇಬ' ಸಿನೆಮಾದ ಪ್ರಚಾರ ಹಾಡು 'ಕೋಳಿಕೆರಂಗ' ಕೂಡ ಬಿಡುಗಡೆಯಾಗಲಿದೆ. ಕನ್ನಡ ಚಿತ್ರರಂಗದಲ್ಲಿ ಪುತ್ರನನ್ನು ಪರಿಚಯಿಸುತ್ತಿರುವ ಸಿನೆಮಾದ ಈ ಹಾಡು ನಟನಿಗೆ ವಿಶಿಷ್ಟ ಉಡುಗೊರೆಯಾಗಲಿದೆ.
ರವಿಚಂದ್ರನ್ ಅವರ ಮುಂದಿನ ಸಿನೆಮಾ 'ಸೀಜರ್'ನ ಕಥೆಗು ಮತ್ತು ಕಾರುಗಳಿಗೂ ಸಂಬಂಧವಿದ್ದು ಅವರ ಹಿಂದಿನ ಸಿನೆಮಾ 'ಏಕಾಂಗಿ'ಯ ನೆನಪು ತರಲಿದೆಯಂತೆ.
ಈ ಮಧ್ಯೆ 'ದಶರಥ', 'ಬಕಾಸುರ' ಸಿನೆಮಾಗಳಲ್ಲಿಯೂ ರವಿಚಂದ್ರನ್ ನಟಿಸುತ್ತಿದ್ದು, ದರ್ಶನ್ ಅಭಿನಯದ 'ಕುರುಕ್ಷೇತ್ರ'ದಲ್ಲಿಯೂ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ.