ನಿಖಿಲ್ ಕುಮಾರ್-ನಿರ್ಮಾಪಕ ಕೋಟಿ ರಾಮು
ಬೆಂಗಳೂರು: ಚೇತನ್ ಕುಮಾರ್ ನಿರ್ದೇಶನದ ನಿಖಿಲ್ ಕುಮಾರ್ ಅವರ ಎರಡನೇ ಚಿತ್ರದ ಶೀರ್ಷಿಕೆಯನ್ನು 'ಹೊಯ್ಸಳ' ಎಂದಿಡಲು ನಿಶ್ಚಯಿಸಲಾಗಿತ್ತು. ಆದರೆ ಇದು ನೆರವೇರುವಂತೆ ಕಾಣುತ್ತಿಲ್ಲ. ಈ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ಅಡಿ ನೊಂದಾಯಿಸಿಕೊಂಡಿರುವ ನಿರ್ಮಾಪಕ ಕೋಟಿ ರಾಮು, ಅದನ್ನು ಬಿಡಲೊಲ್ಲೆ ಎಂದಿದ್ದಾರೆ.
ನಿಖಿಲ್ ಸಿನೆಮಾ ನಿರ್ಮಿಸುತ್ತಿರುವ ಚನ್ನಾಂಬಿಕ ಫಿಲ್ಮ್ಸ್ ಸಂಸ್ಥೆಗೆ ಇದನ್ನು ತಿಳಿಸಿರುವುದಾಗಿ ಹೇಳುವ ರಾಮು "'ಹೊಯ್ಸಳ' ಶೀರ್ಷಿಕೆ ಶಿವರಾಜ್ ಕುಮಾರ್ ಅವರಿಗೆ ಮೀಸಲು. ಆದುದರಿಂದಲೇ ಇದನ್ನು ಬಹಳ ಸಮಯದಿಂದ ಕಾಯ್ದಿರಿಸಿಕೊಂಡಿದ್ದೇನೆ. ಈಗ ಕಥೆ ಸಿದ್ಧವಾಗುತ್ತಿದ್ದು, ಅದು ಶೀರ್ಷಿಕೆಗೆ ಒಪ್ಪುತ್ತದೆ" ಎನ್ನುವ ರಾಮು "ಮತ್ತೊಂದು ಶೀರ್ಷಿಕೆ ಹುಡುಕಿಕೊಳ್ಳುವಂತೆ ಅವರಿಗೆ ತಿಳಿಸಿದ್ದೇನೆ" ಎನ್ನುತ್ತಾರೆ.
ಜೂನ್ ೫ ರಂದು ಚಾಲನೆ ನೀಡಲಿರುವ ಈ ಸಿನೆಮಾಗ ತುರ್ತಾಗಿ ಮತ್ತೊಂದು ಶೀರ್ಷಿಕೆಯ ಹುಡುಕಾಟದಲ್ಲಿದೆ ಚಿತ್ರತಂಡ. ಈ ಸಿನೆಮಾದ ಮೂಲಕ ರೂಪದರ್ಶಿ ರಿಯಾ ನಾಲ್ವಡೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಸಿನೆಮಾಗೆ ಸಂಗೀತ ನೀಡಲಿದ್ದು, ಶ್ರೀಶ ಕುಡುವಲ್ಲಿ ಅವರ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.