ಡಿ ಸತ್ಯ ಪ್ರಕಾಶ್ ನಿರ್ದೇಶನದ ರಾಮಾ ರಾಮಾ ರೇ ಚಿತ್ರದ ಮೂಲಕ ಸ್ಯಾಂಡಲ್ ನಲ್ಲಿ ಗಮನ ಸೆಳೆದಿದ್ದ ನಟ ನಟರಾಜ್ ಈಗ ಹಾಲಿವುಡ್ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದು ಹಾಲುವುಡ್ ನಿರ್ದೇಶಕರ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತಿದೆ.
"ಹಾಲುವುಡ್ ನಿರ್ದೇಶಕ ಸ್ಯಾಂಡಿ ಸಾಯಿ ಎಂಬುವವರು ರಾಮಾ ರಾಮಾ ರೇ ಚಿತ್ರದಲ್ಲಿ ನನ್ನ ನಟನೆಯನ್ನು ನೋಡಿದ್ದು, ತಮ್ಮ ಚಿತ್ರದಲ್ಲಿ ನಟಿಸುವಂತೆ ಆಹ್ವಾನ ನೀಡಿದ್ದಾರೆ" ಎಂದು ನಟರಾಜ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರತೀಯ ಮೂಲದವರಾಗಿರುವ ಸ್ಯಾಂಡಿ ಸಾಯಿ ಭಾರತ-ಕ್ಯಾಲಿಫೋರ್ನಿಯಾ ಜರ್ನಿಯ ಎಳೆ ಇರುವ ಕನ್ನಡ ಸಿನಿಮಾ ಮಾಡಲು ಉತ್ಸುಕರಾಗಿದ್ದು, ಈ ಬಗ್ಗೆ ಚರ್ಚೆ ನಡೆಸಲಿದ್ದು, ಸಿನಿಮಾ ನಿರ್ಮಾಣ ಹಾಲಿವುಡ್ ಪ್ರೊಡಕ್ಷನ್ ಹೌಸ್ ನಿಂದಲೇ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಮುಂದಿನ ಚಿತ್ರ "ಕಳ್ಬೆಟ್ಟದ ದರೋಡೆಕೋರರು" ಬಗ್ಗೆಯೂ ನಟರಾಜ್ ಮಾತನಾಡಿದ್ದು, ದೀಪಕ್ ಮದುವನಳ್ಳಿ ನಿರ್ದೇಶನದ ಚಿತ್ರದ ಚಿತ್ರೀಕರಣ ಶೇ.60 ರಷ್ಟು ಮುಕ್ತಾಯಗೊಂಡಿದೆ. ಉಳಿದ ಭಾಗದ ಚಿತ್ರೀಕರಣ ಮುಂದಿನ ವಾರ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಇನ್ನು ತಮ್ಮ ಮೂರನೇ ಚಿತ್ರದ ಬಗ್ಗೆಯೂ ಮಾತನಾಡಿರುವ ನಟರಾಜ್, ತಮ್ಮ 3 ನೇ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದು ಚಿತ್ರಕಥೆ-ಸಂಭಾಷಣೆಯನ್ನು ಸತ್ಯಪ್ರಕಾಶ್ ಸಿದ್ಧಪಡಿಸುತ್ತಿದ್ದಾರೆ. ಸತ್ಯಪ್ರಕಾಶ್ ತಮ್ಮ ಮತ್ತೊಂದು ಯೋಜನೆಯಲ್ಲಿ ನಿರತರಾಗಿರುವುದರಿಂದ ಬೇರೊಬ್ಬ ನಿರ್ದೇಶಕರು ತಮ್ಮ ಮೂರನೇ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದಿದ್ದಾರೆ.