ಬೆಂಗಳೂರು: ಅಕ್ಟೋಬರ್ 16 ರಂದು ಸೆಟ್ಟೇರಿದ ದುನಿಯಾ ವಿಜಯ್ ಅಭಿನಯದ ಜಾನಿ ಜಾನಿ ಎಸ್ ಪಾಪ ಸಿನಿಮಾಗೆ ಕೊನೆಯ ಕ್ಷಣದಲ್ಲಿ ನಾಯಕಿ ಬದಲಾಗಿದ್ದಾರೆ. ಮೋಹಕ ತಾರೆ ರಮ್ಯಾ ಅವರನ್ನು ವಾಪಸ್ ಬೆಳ್ಳಿ ತೆರೆಗೆ ಕರೆತರೆಬೇಕೆಂಬ ಬಯಸಿದ್ದ ನಿರ್ದೇಶಕ ಪ್ರೀತಮ್ ಗೆ ನಿರಾಸೆಯಾಗಿದೆ.
ಹೀಗಾಗಿ ಜಾನಿ ಮೇರಾ ನಾಮ್ ಸಿನಿಮಾದಲ್ಲಿ ಪದ್ಮಾವತಿ ಹಾಡಿಗೆ ಹೆಜ್ಜೆ ಹಾಕಿದ್ದ ರಮ್ಯಾ ಬದಲು ಸಿನಿಮಾ ತಂಡ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಿದೆ. ಈ ಮೊದಲು ಈ ಸಿನಿಮಾಗೆ ರಚಿತಾರಾಮ್ ಹೆಸರು ಕೇಳಿ ಬಂದಿತ್ತು, ಆದರೆ ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದ ರಚಿತಾ ಸಿನಿಮಾಗೆ ನಿರಾಕರಿಸಿದ್ದರು. ನಂತರ ಚಿತ್ರ ತಂಡ ಶ್ರದ್ಧಾ ಶ್ರೀನಾಥ್ ಜೊತೆ ಚರ್ಚಿಸಿತ್ತು, ಆದರೆ ಶ್ರದ್ಧಾ ಕೂಡ ಸಿನಿಮಾಗೆ ಡೇಟ್ಸ್ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರೆ.
ನೆಲಮಂಗಲದಲ್ಲಿ ಮೋಹನ್ ಬಿ ಕೆರೆ ನಿರ್ಮಾಣ ಮಾಡಿರುವ ಬಹುದೊಡ್ಡ ಸೆಟ್ ನಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಬೇರೆ ನಾಯಕಿಯರ ಡೇಟ್ಸ್ ಗಳು ಸಹ ಹೊಂದಾಣಿಕೆಯಾಗಲಿಲ್ಲ, ಹೀಗಾಗಿ ಅಂತಿಮವಾಗಿ ರಚಿತಾ ರಾಮ್ ನಟಿಸಲು ಒಪ್ಪಿದರು ಎಂದು ನಿರ್ದೇಶಕ ಪ್ರೀತಮ್ ಹೇಳಿದ್ದಾರೆ.
ಕಳೆದ ಮೂರು ತಿಂಗಳಿಂದ ಜಾನಿ ಜಾನಿಗಾಗಿ ವಿಜಯ್ ವರ್ಕೌಟ್ ಮಾಡುತ್ತಿದ್ದು, ಫೈಟಿಂಗ್ ಮತ್ತು ಹಾಡೊಂದನ್ನು ಚಿತ್ರೀಕರಿಸಲಾಗಿದೆ.