ರ್ಯಾಂಪ್ ಮತ್ತು ಫೋಟೋಗ್ರಫಿ ಎಂದು ಬ್ಯುಸಿಯಾಗಿರುವ ಮಾಡೆಲ್ ಶ್ರೀನಿಧಿ ರಮೇಶ್ ಶೆಟ್ಟಿ ತನ್ನ ಚೊಚ್ಚಲ ಚಿತ್ರ ಕೆಜಿಎಫ್ ಬಗ್ಗೆ ಕೂಡ ಕಾತರರಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರದಲ್ಲಿ ನಟ ಯಶ್ ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಚಿತ್ರೀಕರಣ ಮುಕ್ತಾಯದ ಹಂತಕ್ಕೆ ತಲುಪಿದ್ದು ಮೇ ತಿಂಗಳಲ್ಲಿ ಸಂಪೂರ್ಣ ಮುಗಿಯಲಿದೆ. ಈ ಮಧ್ಯೆ ಎರಡನೇ ಚಿತ್ರದ ಆಯ್ಕೆಗೆ ಕಾತರರಾಗಿರುವ ಶ್ರೀನಿಧಿ ಸ್ಕ್ರಿಪ್ಟ್ ಗಳನ್ನು ನೋಡುವುದು ಮತ್ತು ಹಲವು ನಿರ್ದೇಶಕರುಗಳ ಜೊತೆ ಮಾತುಕತೆಯಲ್ಲಿ ನಿರತರಾಗಿದ್ದಾರೆ.
ಕೆಜಿಎಫ್ ನನ್ನ ಆದ್ಯತೆಯಾಗಿರುವುದರಿಂದ ಅದರ ಬಗ್ಗೆಯೇ ಸಂಪೂರ್ಣ ಗಮನಹರಿಸುತ್ತಿದ್ದೇನೆ. ಬೇರೆ ಪ್ರಾಜೆಕ್ಟ್ ಗಳ ಬಗ್ಗೆ ಯೋಚಿಸುತ್ತಿರಲಿಲ್ಲ. ಇದೀಗ ಚಿತ್ರೀಕರಣ ಕೊನೆಯ ಹಂತದಲ್ಲಿರುವುದರಿಂದ ಬೇರೆ ಬೇರೆ ಸಿನಿಮಾಗಳ ಕಡೆ ಗಮನಹರಿಸಬಹುದು ಎಂದು ಭಾವಿಸಿದ್ದೇನೆ. ಆದರೆ ಕೆಜಿಎಫ್ ಮೇಲೆ ನನ್ನ ನಿರೀಕ್ಷೆ ಅಪಾರವಾಗಿದೆ. ಕೆಜಿಎಫ್ ಚಿತ್ರತಂಡ ಕೆಲಸ ಮಾಡಲು ಉತ್ತಮ ವಾತಾವರಣ ಕಲ್ಪಿಸಿಕೊಟ್ಟಿತು. ಈ ಚಿತ್ರದಿಂದ ಸಾಕಷ್ಟು ಕಲಿತುಕೊಂಡೆ, ನಾನು ಮಂಗಳೂರು ಮೂಲದವಳಾಗಿರುವುದರಿಂದ ಆ ಭಾಷೆಯನ್ನು ಮಾತನಾಡಲು ಹೆಚ್ಚು ಇಷ್ಟಪಡುತ್ತೇನೆ ಎನ್ನುತ್ತಾರೆ ಶ್ರೀನಿಧಿ.
ಶ್ರೀನಿಧಿಗೆ ಭಾಷೆ ಅಡ್ಡಿಯಾಗಲಿಲ್ಲವಂತೆ. ಕೆಜಿಎಫ್ ನ್ನು 5 ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.