ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ತಮಿಳುನಾಡಿನ ರೈತರು ಆಗ್ರಹಿಸಿದ್ದಾರೆ. ರೈತರ ಹೋರಾಟಕ್ಕೆ ಅಲ್ಲಿನ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಯಾಗಿ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರು ಮೊದಲ ಬಾರಿಗೆ ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದಾರೆ.
ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ತಮಿಳುನಾಡಿನ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕಾವೇರಿ ನೀರಿನ ವಿಷಯದಲ್ಲಿ ತಮಿಳುನಾಡು ಮೊದಲಿನಿಂದಲೂ ಅಸಹನೆ, ಅಸಹಕಾರ ತೋರುತ್ತಿದೆ. ಈಗ ಮತ್ತೆ ತಮಿಳುನಾಡು ಬಂದ್ ಆಚರಿಸಿದ್ದಲ್ಲದೆ ಮುಖಂಡರು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಈಗ ನಮ್ಮ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪ ಬರುತ್ತಿರುವುದರಿಂದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಏನೇ ಪರಿಹಾರ ಸೂಚಿಸಿರಲಿ ಆ ಬಗ್ಗೆ ತಮಿಳುನಾಡು ಕ್ಯಾತೆ ತೆಗೆಯುತ್ತಲೇ ಬಂದಿದೆ. ಕೇಂದ್ರ ಮಾತ್ರವಲ್ಲ, ಸುಪ್ರೀಂಕೋರ್ಟ್ಆದೇಶಕ್ಕೂ ಅಲ್ಲಿನ ರಾಜಕಾರಣಿಗಳು ಅಪಸ್ವರ ಎತ್ತುತ್ತಾರೆ,.
ಈಗ ತಮಿಳುನಾಡಿನಲ್ಲಿ ಯಾವುದೇ ಚುನಾವಣೆಯಲ್ಲ, ಆದರೂ ಇಬ್ಬರು ತಮಿಳು ನಟರು ರಾಜಕೀಯ ಪ್ರವೇಶ ಮಾಡುವ ಆತುರದಲ್ಲಿ ಹಿಂದಿನ ಮುಖಂಡರಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗ ಕರ್ನಾಟಕ ರಾಜ್ಯ, ಇಲ್ಲಿನ ಜಲ, ಭಾಷೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರ ಜತೆ ನಾನೂ ಕೂಡ ಟೊಂಕ ಕಟ್ಟಿ ನಿಂತಿದ್ದೇನೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.