ಖಾಸಗಿ ಸುದ್ದಿ ವಾಹನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಗಾಂಧಾರಿ ಮೂಲಕ ಕನ್ನಡಿಗರ ಮನಗೆದ್ದಿದ್ದ ಪ್ರತಿಭಾವಂತ ನಟಿ ಕಾವ್ಯ ಗೌಡ.
ಸಾಮಾಜಿಕ ಜಾಲತಾಣಗಳಲ್ಲಿ ಜೂನಿಯರ್ ರಾಧಿಕಾ ಪಂಡಿತ್ ಎಂದೇ ಖ್ಯಾತಿ ಪಡೆದಿರುವ ಕಾವ್ಯ ಗೌಡ ಅವರು, ಚಿತ್ರರಂಗದ ತಮ್ಮ ಪಯಣ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ.
ಧಾರಾವಾಹಿಯಲ್ಲಿ ಮಿಂಚುವುದಕ್ಕೂ ಮುನ್ನಾ ಕಾವ್ಯ ಅವರು ರಿಯಾಲಿಟಿ ಶೋ ಒಂದರಲ್ಲಿ ಕಾವ್ಯ ಗೌಡ ಸ್ಪರ್ಧಿಯಾಗಿದ್ದರು. ಕಾವ್ಯ ಗೌಡ ಅಥ್ಲೀಟ್ ಕೂಡ ಹೌದು. ಮಿಂಚಿನ ವೇಗದಲ್ಲಿ 100 ಮೀ ಓಡಿ 24 ನ್ಯಾಷನಲ್ ಕಂಪ್ಲೀಟ್ ಮಾಡಿರುವ ಖ್ಯಾತಿ ಕೂಡ ಕಾವ್ಯ ಅವರದ್ದು.
ಅಪಘಾತವೊಂದರಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಕಾವ್ಯ ಅವರು ಮತ್ತೆ ಕ್ರೀಡೆಯತ್ತ ಮುಖ ಮಾಡದೆ, ಮಾಡೆಲಿಂಗ್ ಹಾಗೂ ನಟನೆಯತ್ತ ಗಮನ ಹರಿಸಿದ್ದರು.
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ನನ್ನ ಅದೃಷ್ಟ. ಸಿನಿಮಾಗಳಲ್ಲಿ ನಟಿಸುತ್ತೇನೆಂದು ಎಂದೂ ತಿಳಿದಿರಲಿಲ್ಲ ಎಂದು ಕಾವ್ಯಾ ಗೌಡ ಹೇಳಿದ್ದಾರೆ.
ಕಾಲಿಗೆ ಪೆಟ್ಟಿ ಬಿದ್ದ ನಂತರ ಕ್ರೀಡೆಯತ್ತ ಮುಖ ಮಾಡಿರಲಿಲ್ಲ. ಓಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿ ಬಂದಿತ್ತು. ಎಂಬಿಎ ಮಾಡುತ್ತಿದ್ದಾಗ ಟಿವಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಬಳಿಕ ಬಕಾಸುರ ಚಿತ್ರದಲ್ಲಿ ನಟಿಸುವ ಅವಕಾಶ ದೊರಕಿತು. ನನಗೂ ಪ್ರತಿಭೆಯಿದೆ ಎನಿಸಿತು. ಪಾತ್ರಕ್ಕೆ ನಾನು ಸಂಪೂರ್ಣವಾಗಿ ಒಪ್ಪುತ್ತೇನೆಂದೆನಿಸಿತು.
ಕ್ರೀಡೆಯಲ್ಲಿ ಮುಂದುವರೆಯುವುದು ನನ್ನ ಕನಸಾಗಿತ್ತು. ಆದರೆ, ಚಿತ್ರರಂಗಕ್ಕೆ ಬಂದೆ. ನಾನು ಇಷ್ಟಪಟ್ಟಿದ್ದು ಪೂರ್ಣಗೊಳ್ಳಲಿಲ್ಲ. ಆದರೆ, ಜೀವನ ಈ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂದು ಎಂದಿಗೂ ತಿಳಿದಿರಲಿಲ್ಲ. ಎಲ್ಲವೂ ಒಳ್ಳೆಯದೇ ಆಗುತ್ತಿದೆ. ಚಿತ್ರರಂಗದಿಂದ ಹೆಸರು, ಹಣ ದೊರೆಯುತ್ತಿದ್ದು, ಸಿಕ್ಕ ಅವಕಾಶಗಳನ್ನು ಬೇಡ ಎನ್ನದೆ, ಒಪ್ಪಿಕೊಳ್ಳುತ್ತಿದ್ದೇನೆ. ಇದನ್ನು ನನ್ನ ಅದೃಷ್ಟ ಎಂದು ತಿಳಿಯುತ್ತಿದ್ದೇನೆಂದು ಕಾವ್ಯ ಹೇಳಿದ್ದಾರೆ.
184 ಜಾಹೀರಾತುಗಳಲ್ಲಿ ಉತ್ತಮ ನಟರೊಂದಿಗೆ ನಟಿಸಿದ್ದೇನೆ. ಇನ್ನು ಧಾರಾವಹಿಗಳಿಗೆ ಬಂದರೆ ದಿನಕ್ಕೆ 19-20 ದೃಶ್ಯಗಳಲ್ಲಿ ನಟಿಸುತ್ತೇನೆ. ಬಕಾಸುರ ಚಿತ್ರ ಸಸ್ಪೆನ್ಸ್ ತ್ರಿಲ್ಲರ್ ಚಿತ್ರವೆಂದೇ ಹೇಳಬಹುದು. ನಾನು ವಕೀಲೆಯಾಗಿ ನಟಿಸುತ್ತಿದ್ದೇನೆ. ರೋಹಿತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಕೀಲೆಯಾಗಿ ಅಭಿನಯಿಸುತ್ತಿರುವುದು ಅತ್ಯಂತ ಖುಷಿ ತಂದಿತ್ತು. ಪಾತ್ರವನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಮೆಜೆಸ್ಟಿಕ್ ನಲ್ಲಿರುವ ವಕೀಲರನ್ನು ಭೇಟಿ ಮಾಡಿದ್ದೆ. ಆದರೆ, ಅದರ ಅಗತ್ಯವಿಲ್ಲ ಎಂದು ನಿರ್ದೇಶಕರು ಹೇಳಿದ್ದರು. ಅವರ ನಿರ್ದೇಶನವನ್ನು ನಾನು ಅನುಸರಿಸಿದ್ದೆ. ಚಿತ್ರದಲ್ಲಿ ವಕೀಲೆ ಅಮೃತಾ ಪಾತ್ರದಲ್ಲಿ ನಟಿಸಿದ್ದೇನೆ. ತೀರಾ ವಾದಗಳೇನು ಮಾಡಿಲ್ಲ. ಚಿತ್ರದ ಕಥೆಗೆ ಆತ್ಮ ನಾನಾಗಿದ್ದೇನೆಂದು ತಿಳಿಸಿದ್ದಾರೆ.
ನಾನು ಅತ್ಯಂತ ಸುಂದರ, ಬುದ್ದಿವಂತ ಹಾಗೂ ಉತ್ತಮ ನಟಿಯಾಗಿದ್ದೇನೆ. ಇದು ನನ್ನ ಗುಣಗಳು. ನನ್ನ ಪ್ರತಿಭೆಗಳನ್ನು ಹುಡುಕುತ್ತಿರುವ ನಿರ್ದೇಶಕರಿಗೆ ನನ್ನ ಕೆಲಸದ ಬಗ್ಗೆ ಸಂತಸವಿದೆ ಎಂದಿ ಹೇಳಿದ್ದಾರೆ.
ಮೊದಲನೇ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಜನರ ಪ್ರತಿಕ್ರಿಯೆಗಳಿಗಾಗಿ ತವಕದಲ್ಲಿದ್ದೇನೆ. ಮೊದಲ ಚಿತ್ರದ ಪ್ರತಿಕ್ರಿಯೆಗಳು ಮುಂದಿನ ಚಿತ್ರಗಳಿಗೆ ಸಹಾಯ ಮಾಡಲಿದೆ ಎಂದಿದ್ದಾರೆ.