ಸಿನಿಮಾ ಸುದ್ದಿ

ಜಯಲಲಿತಾ 2ನೇ ಪುಣ್ಯಸ್ಮರಣೆ ದಿನವೇ ಸೆಟ್ಟೇರಿದ 'ದಿ ಐರನ್ ಲೇಡಿ'

Srinivasamurthy VN
ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಹಾಗೂ ಎಐಎಡಿಎಂಕೆ ಪಕ್ಷದ ಅಧಿನಾಯಕಿ ದಿವಂಗತ ಜೆ ಜಯಲಲಿತಾ ಅವರ 2ನೇ ಪುಣ್ಯಸ್ಮರಣೆ ದಿನವೇ ಅವರ ಜೀವನಾಧಾರಿತ ಚಿತ್ರ 'ದಿ ಐರನ್ ಲೇಡಿ' ಸೆಟ್ಟೇರಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಹೊರಟಿರುವ 'ದಿ ಐರನ್ ಲೇಡಿ' ಸಿನಿಮಾದ ಫಸ್ಟ್ ಲುಕ್ ಜಯಲಲಿತಾ ಅವರ ಪುಣ್ಯತಿಥಿ ದಿವಸ ಅಂದರೆ ಡಿಸೆಂಬರ್ 5ಕ್ಕೆ ಬಿಡುಗಡೆಯಾಗಿದೆ. ನಿರ್ದೇಶಕ ಮಿಸ್ಕಿನ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ದುಡಿದಿದ್ದ ಪ್ರಿಯದರ್ಶಿನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.  ದಿ ಐರನ್ ಲೇಡಿ ಅರ್ಥಾತ್ ಜಯಲಲಿತಾ ಪಾತ್ರಧಾರಿಯಾಗಿ ಖ್ಯಾತ ನಟಿ ನಿತ್ಯಾಮೆನನ್ ನಟಿಸುತ್ತಿದ್ದು, ನಿತ್ಯಾ ಈ ಪಾತ್ರಕ್ಕಾಗಿ ಸಾಕಷ್ಟು ಕಸರತ್ತು ಮಾಡಿದ್ದಾರೆ.
ನಿತ್ಯಾ ಮೆನನ್ ಜಯಲಲಿತಾ ಪಾತ್ರಕ್ಕೆ ಯಾವ ಪರಿ ಸಿದ್ಧತೆ ಮಾಡಿಕೊಂಡಿರಬಹುದು ಅನ್ನೋದು ಈ ಸಿನಿಮಾದ ಪೋಸ್ಟರ್ ನೋಡಿದರೆ ಗೊತ್ತಾಗುತ್ತೆ. ಆರಂಭದಲ್ಲಿ ಜನಪ್ರಿಯ ಚಿತ್ರನಟಿಯಾಗಿದ್ದ ಜಯಲಲಿತಾ ಬಳಿಕ ರಾಜಕಾರಣಕ್ಕಿಳಿದು ಅಲ್ಲಿ ಸಂಚಲನ ಮೂಡಿಸಿದ ಬಗೆಯನ್ನು ಈ ಚಿತ್ರ ಪ್ರತಿಫಲಿಸಲಿದೆ. ದೊಡ್ಡ ಬೊಟ್ಟಿಟ್ಟುಕೊಂಡ, ದಪ್ಪನೆಯ ಹೆಣ್ಣುಮಗಳ ಲುಕ್ ನಲ್ಲಿ ನಿತ್ಯಾ ಥೇಟ್ ಜಯಲಲಿತಾರಂತೆ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ದಿನಗಟ್ಟಲೆ ಜಯಲಲಿತಾ ಅವರ ಹಾವ ಭಾವಗಳನ್ನು ಅಭ್ಯಸಿಸಿರೋ ನಿತ್ಯಾ ಜಯಲಲಿತಾ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಲು ಸಿದ್ಧರಾಗಿದ್ದಾರೆ. ತೂಕವೂ ಹೆಚ್ಚಾಗಿ, ಅವರು ತೂಕದ ಮಹಿಳೆಯಾಗಿ ಕಾಣಿಸಿಕೊಂಡಿರುವುದು ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಸ್ಪಷ್ಟವಾಗಿದೆ.
ಈ ಸಿನಿಮಾ ಜಯಲಲಿತಾ ಜನ್ಮದಿನ ಫೆಬ್ರವರಿ 24ಕ್ಕೆ ತೆರೆಕಾಣಲಿದೆ. ಸಿನಿಮಾ ಕುರಿತು ಮಾಹಿತಿ ನೀಡಿರುವ ನಿರ್ದೇಶಕಿ ಪ್ರಿಯದರ್ಶಿನಿ, 'ಜಯಲಲಿತಾ ಅವರ ಎಳವೆಯಿಂದ ಅವರು ಕೊನೆಯುಸಿರೆಳೆಯುವವರೆಗಿನ ವಿವರಗಳು ಸಿನಿಮಾದಲ್ಲಿರುತ್ತದೆ. ಜಯಲಲಿತಾ ಪಾತ್ರಕ್ಕಾಗಿ ಬಹಳ ಮಂದಿ ನಟಿಯರನ್ನು ಸಂಪರ್ಕಿಸಿದ್ದೆ. ಹೆಚ್ಚಿನವರು ಹಿಂದೇಟು ಹಾಕಿದರು. ನಿತ್ಯಾ ಮಾತ್ರ ಖುಷಿಯಿಂದ ಪಾತ್ರ ಮಾಡಲು ಒಪ್ಪಿ, ಬಹಳ ಬೋಲ್ಡ್ ಆಗಿ ಅಭಿನಯಿಸಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ' ಎಂದಿದ್ದಾರೆ.
SCROLL FOR NEXT