ಬೆಂಗಳೂರು: ರಾಕಿಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಕೆಜಿಎಫ್' ಚಿತ್ರ ಇದೇ ಡಿಸೆಂಬರ್ 21ರಂದು ವಿಶ್ವದಾದ್ಯಂತ ಏಕಕಾಲಕ್ಕೆ 2 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಬಿಡುಗಡೆಗೆ ಚಿತ್ರ ತಂಡ ಸಕಲ ಸಿದ್ಧತೆ ಪೂರ್ಣಗೊಳಿಸಿದೆ.
ಮೂಲಗಳ ಪ್ರಕಾರ ಡಿಸೆಂಬರ್ 21ರ ಮುಂಜಾನೆ 4ಗಂಟೆಗೆ ಬೆಂಗಳೂರಿನಲ್ಲಿ ಮೊದಲ ಪ್ರದರ್ಶನ ನಿಗದಿಯಾಗಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಿದೆ. ಸಿನಿಮಾದ ಹಿಂದಿ ಅವತರಣಿಕೆಯು ಒಂದು ಸಾವಿರ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಥಿಯೇಟರ್ ನಲ್ಲಿ ಮೊಬೈಲ್ ಮೂಲಕ ಸಿನಿಮಾ ಚಿತ್ರೀಕರಿಸುವವರು, ಫೇಸ್ ಬುಕ್ ಲೈವ್ ಮಾಡುವವರ ಮೇಲೆ ಹದ್ದಿನಕಣ್ಣು ಇಡಲಾಗಿದೆ. ತೀವ್ರ ನಿಗಾ ಇಡಲು ಖಾಸಗಿ ಏಜೆನ್ಸಿಯೊಂದನ್ನು ನೇಮಿಸಲಾಗಿದ್ದು, ಎಲ್ಲ ಭಾಷೆಯ ಅವತರಣಿಕೆಗಳಿಗೂ ಕೋಡ್ ನೀಡಲಾಗಿದೆ. ಇದರಿಂದ ಯಾವುದೇ ಚಿತ್ರಮಂದಿರದಲ್ಲಿ ಸಿನಿಮಾದ ತುಣುಕುಗಳು ಸೋರಿಕೆಯಾದರೂ ತಕ್ಷಣವೇ ಪತ್ತೆಹಚ್ಚಲು ಚಿತ್ರತಂಡಕ್ಕೆ ಸುಲಭವಾಗಲಿದೆ ಎಂದು ಚಿತ್ರ ತಂಡ ಹೇಳಿದೆ.