ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್' ನ ಕುರಿತ ಕ್ರೇಜ್ ಹೆಚ್ಚಿರುವಂತೆಯೇ ವಾರಾಂತ್ಯದಲ್ಲಿ ಟಿಕೆಟ್ ದರ ಹೆಚ್ಚಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.
ಚಿತ್ರದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಚಿತ್ರ ಇದೇ ಡಿಸೆಂಬರ್ 21ರಂದು ವಿಶ್ವದಾದ್ಯಂತ ಏಕಕಾಲಕ್ಕೆ 2 ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಬಿಡುಗಡೆಗೆ ಚಿತ್ರ ತಂಡ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಚಿತ್ರ ಭಾರತದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಅಂತೆಯೇ ಮೊದಲ ಹಂತದಲ್ಲಿ ಅಮೆರಿಕ, ಕೆನಡಾ ಮತ್ತು ಇಂಗ್ಲೆಂಡ್ ನಲ್ಲಿ ಚಿತ್ರ ತೆರೆಕಾಣುತ್ತಿದೆ. ಹಂತ ಹಂತವಾಗಿ ಯುರೋಪ್ ರಾಷ್ಟ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ವಾರಾಂತ್ಯದಲ್ಲಿ ಟಿಕೆಟ್ ದರ ಹೆಚ್ಚಳ
ಇದೇ ವೇಳೆ ಟಿಕೆಟ್ ದರ ಹೆಚ್ಚಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯ ದಿನಗಳಲ್ಲಿ ಟಿಕೆಟ್ ದರ ಹೆಚ್ಚಿಸಲು ಕಾನೂನಿನಡಿ ಅವಕಾಶವಿಲ್ಲ. ವಾರಾಂತ್ಯದಲ್ಲಿ ದರ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.