ಚಿತ್ರರಂಗದಲ್ಲಿ ಪ್ರತಿಯೊಬ್ಬ ನಟಿಯೂ ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇಟ್ಟುಕೊಂಡಿರುತ್ತಾರೆ ಅಂತಹ ಪಾತ್ರದ ಹುಡುಕಾಟದಲ್ಲೂ ತೊಡಗಿರುತ್ತಾರೆ. ಅಂತಹ ಅವಕಾಶ ಸಾನ್ವಿ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಅವರಿಗೆ ಒದಗಿಬಂದಿದೆ.
ವರುಣದೇವ ಕೊಲಪು ನಿರ್ದೇಶನದ ಪಾದಾರ್ಪಣೆ ಚಿತ್ರ ಸಾನ್ವಿ ಸಿನಿಮಾದಲ್ಲಿ ಶಾನ್ವಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು ಚಿತ್ರದ ಕುರಿತಂತೆ ನಾಯಕಿ ಶಾನ್ವಿ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸದ್ಯ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಶಾನ್ವಿ ನಟಿಸುತ್ತಿದ್ದಾರೆ. ಜತೆ ಜತೆಗೆ ಸಾನ್ವಿ ಚಿತ್ರಕ್ಕೂ ಸಿದ್ಧತೆ ನಡೆಸಿದ್ದಾರೆ. ನಾನು ಚಿತ್ರರಂಗದಲ್ಲಿ ಹಲವು ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ನಾಯಕಿ ಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ ಎಂದು ಶಾನ್ವಿ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ವರುಣದೇವ ಸ್ವಾನಿ ಚಿತ್ರ ಸಂಪೂರ್ಣ ಸ್ತ್ರೀ-ಕೇಂದ್ರಿತ ಚಿತ್ರವಲ್ಲ. ಆದರೆ ಕಥೆ ಮಾತ್ರ ನಾಯಕಿ ಸುತ್ತವೇ ಸುತ್ತುತ್ತದೆ. ಕಥೆಯೇ ಸಾನ್ವಿ ಚಿತ್ರದ ನಿಜವಾದ ನಾಯಕ ಎಂದು ನವ ನಿರ್ದೇಶಕ ವರುಣದೇವ ಹೇಳಿದ್ದಾರೆ.
ಚಂದ್ರಲೇಖ ಚಿತ್ರದಲ್ಲಿ ಶಾನ್ವಿ ಅವರ ಅಭಿನಯವನ್ನು ನೋಡಿದ್ದೆ. ನನ್ನ ಚಿತ್ರದ ಪಾತ್ರಕ್ಕೆ ಇವರು ಜೀವ ತುಂಬುತ್ತಾರೆ ಅನಿಸಿತು. ಹೀಗಾಗಿ ನಾನು ಅವರನ್ನು ಆಯ್ಕೆ ಮಾಡಿಕೊಂಡೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಮೂರು ಬಗೆಯ ಪಾತ್ರದಲ್ಲಿ ಶಾನ್ವಿ ಕಾಣಿಸಿಕೊಳ್ಳುತ್ತಾರೆ. ಅಭಿನಯಕ್ಕೆ ಹೆಚ್ಚಿನ ಅವಕಾಶವಿದೆ ಎಂದು ವರುಣದೇವ ಹೇಳಿದ್ದಾರೆ.