ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೋಡಿಯಾಗಿ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ನಟಿಸುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಇದೀಗ ರಶ್ಮಿಕಾ ದರ್ಶನ್ ಜತೆ ಅಭಿನಯಿಸುತ್ತಿರುವುದು ಪಕ್ಕಾ ಆಗಿದೆ.
ಬಿ.ಸುರೇಶ್-ಶೈಲಜಾ ನಾಗ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ದರ್ಶನ್ ಅಭಿನಯದ 51ನೇ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ರಚಿತಾ ರಾಮ್ ಈ ಚಿತ್ರಕ್ಕೆ ನಾಯಕಿಯಾಗುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಇದೀಗ ರಶ್ಮಿಕಾ ಆಯ್ಕೆಯಾಗುವ ಮೂಲಕ ಅಂತೆ-ಕಂತೆಗಳಿಗೆ ತೆರೆ ಎಳೆಯಲಾಗಿದೆ.
ಇನ್ನು ಹೆಸರಿಡದ ಚಿತ್ರದ ಮುಹೂರ್ತ ಸಂಕ್ರಾಂತಿ ಹಬ್ಬದಂದು ನೆರವೇರಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಮತ್ತೋರ್ವ ನಾಯಕಿಗಾಗಿ ಹುಡುಕಾಟ ನಡೆದಿದೆ. ಶೀಘ್ರದಲ್ಲೇ ಫೈನಲ್ ಮಾಡುತ್ತೇವೆ ಎಂದು ನಿರ್ಮಾಪಕಿ ಶೈಲಜಾ ನಾಗ್ ಹೇಳಿದ್ದಾರೆ.
ದರ್ಶನ್ ನಟನೆಯ 51ನೇ ಚಿತ್ರ ಪಕ್ಕಾ ಕಮರ್ಷಿಯಲ್ ಮಾದರಿಯಲ್ಲೇ ಸಿದ್ಧಗೊಳ್ಳಲಿದೆ. ಇದುವರೆಗೂ ದರ್ಶನ್ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಈ ಚಿತ್ರ ದರ್ಶನ್ ಅಭಿಮಾನಿಗಳ ಜತೆಗೆ ಎಲ್ಲ ವರ್ಗಕ್ಕೂ ಇಷ್ಟವಾಗಲಿದೆ ಎಂದು ಶೈಲಜಾ ನಾಗ್ ಭರವಸೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಚಿತ್ರದ ಕುರಿತಂತೆ ಮಾತನಾಡಿದ ರಶ್ಮಿಕಾ ಮಂದಣ್ಣ, ದರ್ಶನ್ ಅವರ ಜತೆ ಕೆಲಸ ಮಾಡಲು ನಾನು ನಿಜವಾಗಿಯೂ ಉತ್ಸುಕಳಾಗಿದ್ದೇನೆ. ನಮ್ಮ ಜೋಡಿ ಮ್ಯಾಜಿಕ್ ಮಾಡಲಿದೆ. ಇದಕ್ಕೂ ಮೊದಲೇ ನಾನು ದರ್ಶನ್ ಅವರ ಜೊತೆ ತಾರಕ್ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಚಮಕ್ ಚಿತ್ರದಿಂದಾಗಿ ಡೇಟ್ಸ್ ಸಿಗದೆ ಆ ಚಿತ್ರದಲ್ಲಿ ಅವಕಾಶ ಕೈತಪ್ಪಿತ್ತು ಎಂದರು.
ಕನ್ನಡದಲ್ಲಿ ಇದು ನನ್ನ ನಾಲ್ಕನೇ ಚಿತ್ರ. ಇನ್ನು ತೆಲುಗಿನ ಪಾದಾರ್ಪಾಣೆ ಚಿತ್ರ ಚಲೋ ಬಿಡುಗಡೆ ಹಾದಿಯಲ್ಲಿದೆ. ವಿಜಯ್ ದೇವರಕೊಂಡ ಜತೆಗೆ ನಟಿಸುತ್ತಿರುವ ಚಿತ್ರವು ಚಿತ್ರೀಕರಣ ಹಂತದಲ್ಲಿದೆ. ಈ ಎರಡು ಚಿತ್ರ ಬಿಟ್ಟರೆ ತೆಲುಗಿನಲ್ಲಿ ಮತ್ಯಾವ ಚಿತ್ರಕ್ಕೂ ಸಹಿ ಹಾಕಿಲ್ಲ ಎಂದರು.
ಭರ್ಜರಿ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದು ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಲಿದ್ದಾರೆ. ಪಿ ಕುಮಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.