ಚಂದನ್ ಶೆಟ್ಟಿ (ಸಂಗ್ರಹ ಚಿತ್ರ)
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 5ರ ವಿಜೇತರಾಗಿ ರ್ಯಾಪರ್ ಚಂದನ್ ಶೆಟ್ಟಿ ಆಯ್ಕೆಯಾಗಿದ್ದು, ರೂ.50 ಲಕ್ಷ ಗೆದ್ದಿದ್ದಾರೆ.
ನಗರ ಬಿಡದಿ ಹತ್ತಿರವಿರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಚಂದನ್ ಶೆಟ್ಟಿಯನ್ನು ಸುದೀಪ್ ಅವರು ವಿಜೇತ ಎಂದು ಘೋಷಣೆ ಮಾಡಿದ್ದು, ದಿವಾಕರ್ ಮೊದಲ ರನ್ನರ್ ಅಪ್ ಹಾಗೂ ಜೆಕೆ ಖ್ಯಾತಿಯ ಜಯರಾಮ್ ಕಾರ್ತಿಕ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ವಿಜೇತರೆಂದು ಸುದೀಪ್ ಅವರು ಘೋಷಣೆ ಮಾಡುತ್ತಿದ್ದಂತೆಯೇ ಚಂದನ್ ಅವರು ಟ್ರೋಫಿಯನ್ನು ತಮ್ಮ ಪೋಷಕರಿಗೆ ನೀಡಿದರು. ಬಳಿಕ ತಮ್ಮ ಕಲೆಯನ್ನು ಗುರ್ತಿಸಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಇದೇ ವೇಳೆ ಚಂದನ್ ಶೆಟ್ಟಿ ಧನ್ಯವಾದಗಳನ್ನು ಹೇಳಿದರು. ಅಲ್ಲದೆ, ಕನ್ನಡ ಭಾಷೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವುದಾಗಿ ಪ್ರಮಾಣ ಮಾಡಿದರು.
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದ 5 ಮಂದಿಯ ಪೈಕಿ ಚಂದನ್, ದಿವಾಕರ್ ಹಾಗೂ ಜಯರಾಮ್ ಕಾರ್ತಿಕ್ ಉಳಿದುಕೊಂಡಿದ್ದರು. ಶನಿವಾರದಿಂದ ಭಾನುವಾರ ಸಂಜೆಯವರೆಗೂ ನಡೆದ ಫಿನಾಲೆಯಲ್ಲಿ ಚಂದನ್ ಶೆಟ್ಟಿ ಅವರು ದಿವಾಕರ್ ಮತ್ತು ಜೆಕೆಯನ್ನು ಹಿಂದೆ ತಳ್ಳಿ ಗೆಲುವಿನ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.