ಬೆಂಗಳೂರು: ಕನ್ನಡದ ಬಹುತೇಕ ನಾಯಕಿಯರು ಪರಭಾಷಾ ಚಿತ್ರಗಳಲ್ಲಿ ಸಹ ಅಭಿನಯದ ಛಾಪು ಮೂಡಿಸುತ್ತಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ತೆಲುಗಿನ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದು ಅಲ್ಲಿನ ಚಿತ್ರರಸಿಕರ ಫಾಲಿಗೆ ಮೆಚ್ಚಿನ ನಾಯಕಿ ಎನಿಸಿದ್ದರು. ಇದೀಗ ಕನ್ನಡದ ಇನ್ನೊಬ್ಬ ನಾಯಕಿ, ಬುಲ್ ಬುಲ್ ಬೆಡಗಿ ರಚಿತಾ ರಾಮ್ ಸಹ ತೆಲುಗು ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಲು ತಯಾರಾಗಿದ್ದಾರೆಂದು ಸುದ್ದಿಗಳು ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಇದಾಗಲೇ ತೆಲುಗಿನಲ್ಲಿ ಅಭಿನಯಕ್ಕಾಗಿ ಸಾಕಷ್ಟು ಅವಕಾಶಗಳು ರಚಿತಾ ಅವರನ್ನು ಅರಸಿ ಬಂದಿದೆ ಎನ್ನಲಾಗಿದ್ದು ಕನ್ನಡದ ಚಮಕ್ ಚಿತ್ರದ ರೀಮೇಕ್ ಸಹ ಅದರಲ್ಲಿ ಸೇರಿದೆ ಎನ್ನಲಾಗಿದೆ. ಇದರಲ್ಲಿ ತೆಲುಗಿನ ಖ್ಯಾತ ನಟ ನಾನಿ ಅಭಿನಯವಿದೆ ಎನ್ನುವುದು ವಿಶೇಷ. ಇನ್ನು ರಚಿತಾ ಅಭಿನಯದ ಮೊದಲ ತೆಲುಗು ಚಿತ್ರದಲ್ಲಿ ಇಶಾನ್ ನಾಯಕ ನಟನಾಗಿರಲಿದ್ದು ಕೊಂಡ ವಿಜಯ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವವರಿದ್ದಾರೆ ಎನ್ನಲಾಗುತ್ತಿದೆ.
ಸಿಆರ್ ಮನೋಹರ್ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಮಾರ್ಚ್ ನಿಂದ ಪ್ರಾಋಅಂಭಗೊಳ್ಳಲಿದ್ದು ಇದೀಗ ಚಿತ್ರಕಥೆ ರಚನಾ ಕಾರ್ಯ ಪ್ರಗತಿಯಲ್ಲಿದೆ. ಈ ಕುರಿತಂತೆ ನಿರ್ಮಾಪಕರಾದ ಮನೋಹರ್ ಅವರನ್ನು ಎಕ್ಸ್ ಪ್ರೆಸ್ ಕೇಳಿದಾಗ ಅವರೂ ಸಹ ಮಾತುಕತೆ ನಡೆಯುತ್ತಿರುವುದು ನಿಜ, ಇದಿನ್ನೂ ಆರಂಭಿಕ ಹಂತದಲ್ಲಿದು ಸ್ಕ್ರಿಪ್ಟ್ ಒಮ್ಮೆ ತಯಾರಾದಮೇಲೆ ನಟರು, ತಂತ್ರಜ್ಞರ ಆಯ್ಕೆ ಅಂತಿಮಗೊಳ್ಳಲಿದೆ ಎಂದಿದ್ದಾರೆ.
ಎಲ್ಲವೂ ಎಣಿಕೆಯಂತೆ ನಡೆದರೆ ರಚಿತಾ ರಾಮ್ ತೆಲುಗಿನಲ್ಲಿಯೂ ಅಭಿನಯಿಸುವ ಮೂಲಕ ಅಲ್ಲಿನ ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಳ್ಳಲಿದ್ದಾರೆ. ಈ ಮೂಲಕ ಕನ್ನಡದ ಇನ್ನೊಬ್ಬ ನಟಿ ಪರಭಾಷಾ ಚಿತ್ರರಂಗದಲ್ಲಿ ಮಹತ್ವದ ಸ್ಥಾನ ಹೊಂದಲಿದ್ದಾರೆ.