ಬೆಂಗಳೂರು: ಕನ್ನಡದ ಯುವ ನಟರಾಗಿದ್ದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಪರಾರಿಯಾಗಲು ಸಹಾಯ ಮಾಡಿದ್ದ ಆರೋಪದ ಮೇಲೆ ನಟ ದುನಿಯಾ ವಿಜಯ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಸುಂದರ್ ಗೌಡ ಪರಾರಿಯಾಗಲು ಸಹಾಯ ಮಾಡಿದ್ದ ಆರೋಪ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳ ಮೇಲೆ ದುನಿಯಾ ವಿಜಯ್ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿದ್ದರು.
ಎಫ್ಐಆರ್ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಲ್ಲಿದ್ದ ವಿಜಯ್ ತಲೆಮರೆಸಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದೀಗ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.
ಮಾಸ್ತಿಗುಡಿ ಸಿನಿಮಾದ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್ ಗೌಡ ವಿರುದ್ಧ ರಾಮನಗರದ ಜೆಎಂಎಫ್ಸಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಈ ವೇಳೆ ಸುಂದರ್ ನನ್ನು ಬಂಧಿಸಲು ತಾವರೆಕೆರೆ ಪೊಲೀಸರು ಬಂದಾಗ ದುನಿಯಾ ವಿಜಯ್ ಮಧ್ಯ ಪ್ರವೇಶಿಸಿದ್ದು ಈ ವೇಳೆ ಸುಂದರ್ ಅಲ್ಲಿಂದ ತಪ್ಪಿಸಿಕೊಂಡಿದ್ದರು. ಈ ಸಂಬಂಧ ದುನಿಯಾ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿತ್ತು.