ಬೆಂಗಳೂರು: ಕೆ. ಮಂಜು ಮಗ ಶ್ರೇಯಸ್ ಹೀರೋ ಆಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
"ಪಡ್ಡೆ ಹುಲಿ' ಇದೇ ತಿಂಗಳ 11ಕ್ಕೆ ಪ್ರಾರಂಭವಾಗುವುದಕ್ಕೆ ಸಜ್ಜಾಗಿದೆ. ಈಗಾಗಲೇ ಶ್ರೇಯಸ್‌ನ ಮೊದಲ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಇತ್ತೀಚೆಗೆ ನಟ-ನಿರ್ದೇಶಕ ಸುದೀಪ್ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಈ ಮಧ್ಯೆ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದು, ಶ್ರೇಯಸ್ ಎದುರು ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸುತ್ತಿದ್ದಾರೆ. ಅನೀಶ್ ತೇಜೇಶ್ವರ್ ಅಭಿನಯದ ಮತ್ತು ನಿರ್ದೇಶನದ "ವಾಸು ಪಕ್ಕಾ ಕಮರ್ಷಿಯಲ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ಅದಾದ ನಂತರ ಚಿರಂಜೀವಿ ಸರ್ಜಾ ಅಭಿನಯದ "ಅಮ್ಮಾ ಐ ಲವ್ ಯೂ' ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದರು. ಆ ಎರಡು ಚಿತ್ರಗಳು ಬಿಡುಗಡೆಯಾಗುವ ಮುನ್ನವೇ, ಅವರು "ಪಡ್ಡೆ ಹುಲಿ'ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
"ಪಡ್ಡೆ ಹುಲಿ' ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣ ಇರಲಿದೆ. ಈ ಹಿಂದೆ "ಉಪ್ಪು ಹುಳಿ ಖಾರ' ಚಿತ್ರವನ್ನು ನಿರ್ಮಿಸಿದ್ದ ರಮೇಶ್ ರೆಡ್ಡಿ, ಈ ಚಿತ್ರವನ್ನು ತಮ್ಮ ತೇಜಸ್ವಿನಿ ಎಂಟರ್‌ಪ್ರೈಸಸ್ ಬ್ಯಾನರ್‌ನ ಮೂಲಕ ನಿರ್ಮಿಸುತ್ತಿದ್ದಾರೆ.