ಬೆಂಗಳೂರು: ಡಿಜಿಟಲ್ ಸರ್ವಿಸ್ ಪ್ರೊವೈಡರ್ಗಳ ದರ ಕಡಿತಕ್ಕೆ ಆಗ್ರಹಿಸಿ ದಕ್ಷಿಣ ಭಾರತ ಸಿನಿಮಾ ತಯಾರಕರು ಶುಕ್ರವಾರ ಬಂದ್ ಘೋಷಣೆ ಮಾಡಿದ್ದು, ಪರಿಣಾಮ ಯಾವುದೇ ಹೊಸ ಚಿತ್ರಗಳು ತೆರೆಕಂಡಿಲ್ಲ. ಅಲ್ಲದೆ ಇತರೆ ಚಿತ್ರಗಳ ಪ್ರದರ್ಶನವಿದ್ದರೂ ಚಿತ್ರ ಮಂದಿಗಳು ಖಾಲಿ ಖಾಲಿ ಹೊಡೆಯುತ್ತಿವೆ.
ಡಿಜಿಟಲ್ ಸರ್ವಿಸ್ ಪ್ರೊವೈಡರ್ ಸಂಸ್ಥೆಗಳು ದರ ಕಡಿತಗೊಳಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಎಲ್ಲ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಹೊಸ ಚಲನಚಿತ್ರ ಪ್ರದರ್ಶನವನ್ನು ಬಂದ್ ಮಾಡಲಾಗಿದ್ದು, ಕನ್ನಡ ನಿರ್ಮಾಪಕರ ಹೊರೆಯನ್ನ ಕಡಿಮೆ ಮಾಡಲು ಮುಂದಾಗಿರುವ ಕರ್ನಾಟಕ ಚಲನಚಿತ್ರ ಮಂಡಳಿ, ಡಿಜಿಟಲ್ ಸರ್ವಿಸ್ ಪ್ರೊವೈಡರ್ ಸಂಸ್ಥೆಗಳ ನಿಲುವನ್ನು ವಿರೋಧಿಸಿ ಇಂದು ರಾಜ್ಯಾದ್ಯಂತ ಸಿನಿಮಾ ಪ್ರದರ್ಶನಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಅದರಂತೆ ಶುಕ್ರವಾರವಾದರೂ ಯಾವುದೇ ಹೊಸ ಚಿತ್ರಗಳು ತೆರೆ ಕಂಡಿಲ್ಲ. ಪರಿಣಾಮ ಈಗಾಗಲೇ ತೆರೆ ಕಂಡ ಚಿತ್ರಗಳ ಪ್ರದರ್ಶನದ ಮೇಲೂ ಇದು ಪರಿಣಾಮ ಬೀರಿದ್ದು, ಚಿತ್ರಮಂದಿರಗಳು ಖಾಲಿ ಖಾಲಿ ಹೊಡೆಯುತ್ತಿವೆ,
ಯುಎಫ್ಒ ಮತ್ತು ಕ್ಯೂಬ್ ಡಿಜಿಟಲ್ ಪ್ರೊವೈಡರ್ ಸಂಸ್ಥೆಗಳು ವಿಧಿಸುತ್ತಿರುವ ದುಬಾರಿ ದರವನ್ನು ಕಡಿಮೆ ಮಾಡುವಂತೆ ಸೌತ್ ಸಿನಿ ಇಂಡಸ್ಟ್ರಿ ಈ ಹಿಂದೆ ಒತ್ತಾಯಿಸಿತ್ತು. ಆದರೆ ಕನ್ನಡ ಮತ್ತು ತಮಿಳು ಚಿತ್ರರಂಗ ನಡೆಸಿದ ಮಾತುಕತೆ ವಿಫಲವಾಗಿತ್ತು. ಇದೇ ಕಾರಣಕ್ಕಾಗಿ ಇಂದಿನಿಂದ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲು ದಕ್ಷಿಣ ಭಾರತ ಸಿನಿ ಇಂಡಸ್ಚ್ರೀಸ್ ನಿರ್ಧರಿಸಿದೆ. ಈಗಾಗಲೇ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು ಸೇರಿ ರಾಜ್ಯಾದ್ಯಂತ ಚಲನಚಿತ್ರ ಪ್ರದರ್ಶನದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ತಿಳಿದುಬಂದಿದೆ.
ಇಂದು ಮತ್ತೆ ಬೆಂಗಳೂರಿನಲ್ಲಿ ಸಭೆ
ಇನ್ನು ಹೊಸ ಚಿತ್ರ ಪ್ರದರ್ಶನ ಬಂದ್ ಮುಂದುವರೆದಿರುವಂತೆಯೇ ಬೆಂಗಳೂರಿನಲ್ಲಿ ಕೊನೆಯ ಪ್ರಯತ್ನವಾಗಿ ಮಾತುಕತೆ ನಡೆಸಲಾಗುತ್ತಿದ್ದು, ಇಂದು ಮತ್ತೆ ಮಾತುಕತೆ ವಿಫಲವಾದರೆ ಕಠಿಣ ನಿರ್ಧಾರ ತಳೆಯುವ ಕುರಿತು ಚಿತ್ರರಂಗದ ಮುಖ್ಯಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮಾತುಕತೆ ವಿಫಲವಾದರೆ ಡಿಜಿಟಲ್ ಸರ್ವಿಸ್ ಪ್ರೊವೈಡರ್ ಗಳಿಗೆ ನೀಡಲಾಗಿರುವ ಚಿತ್ರಗಳ ಪ್ರದರ್ಶನವನ್ನೂ ಸ್ಥಗಿತಗೊಳಿಸಲು ನಿರ್ಮಾಪಕರು ನಿರ್ಧರಿಸಬಹುದು ಎನ್ನಲಾಗಿದೆ.