ಬೆಂಗಳೂರು: ಡಿಜಿಟಲ್ ಸರ್ವಿಸ್ ಪ್ರೊವೈಡರ್ಗಳ ದರ ಕಡಿತ ಸಮಸ್ಯೆ ಈಡೇರುವವರೆಗೂ ರಾಜ್ಯದಲ್ಲಿ ಯಾವುದೇ ಹೊಸ ಚಿತ್ರ ಬಿಡುಗಡೆಯಾಗುವುದಿಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಾ ಗೋವಿಂದು ಅವರು, ಯುಎಫ್ಒ, ಕ್ಯೂಬ್ ದುಬಾರಿ ಶುಲ್ಕ ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಕನ್ನಡ ಚಿತ್ರಗಳು ಬಿಡುಗಡೆ ಆಗುವುದಿಲ್ಲ. ತಮಿಳುನಾಡು ಮತ್ತು ನಾವು ಒಂದಾಗಿದ್ದು, ಈಗ ಅವರಿಗೆ ಬುದ್ದಿ ಕಲಿಸುತ್ತೇವೆ. ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾಡಬೇಡಿ ಎಂದು ಹೇಳಿಕೊಡುತ್ತೀವಿ. ಭೂಮೀನು ನಮ್ಮದೆ, ಫಸಲು ನಮ್ಮದೆ. ರೈತರು ನಾವೆ. ಹೀಗಿರುವಾಗ ಇನ್ಮುಂದೆ ನಾವೇ ಅದನ್ನ ಉಳಿಸಿಕೊಳ್ಳುತ್ತೇವೆ. ಇಲ್ಲಿವರೆಗೂ ಸಾವಿರಾರು ಕೋಟಿ ರೂ. ಗಳಿಸಿದ್ದಾರೆ. ಇನ್ನು ನಾವು ಅವರಿಗೆ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು, ಎಲ್ಲ ಸೆಕ್ಟರ್‌ಗಳಲ್ಲೂ ಒಂದು ಸಮಸ್ಯೆ ಇದೆ. ಪರಿಹಾರಕ್ಕೆ ನಾನೇ ಫಿಲ್ಮ್ ಚೇಂಬರ್‌ಗೆ ಒಂದು ಮಾಡೆಲ್ ಕೊಟ್ಟಿದ್ದೇನೆ. 1 ಪ್ರೊಜೆಕ್ಟರ್ ಬೆಲೆ 8 ಲಕ್ಷ ರೂ. ಆಗುತ್ತದೆ. 100 ಪ್ರೊಜೆಕ್ಟರ್ ಬೆಲೆ 8 ಕೋಟಿ ರೂಪಾಯಿ ಆಗುತ್ತದೆ ಎಂದು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ನಿರ್ಮಾಪಕ ಮುನಿರತ್ನ ಅವರು, ಕ್ಯೂಬ್ ಮತ್ತು ಯುಎಫ್ ಓ ಸರ್ವಿಸ್ ಪ್ರೊವೈಡರ್ ಗಳ ಹಗಲು ದರೋಡೆಯನ್ನು ತಡೆಯಬೇಕು. ಡಿಜಿಟಲ್ ಪ್ರೊವೈಡರ್ಗಳನ್ನು ನಿರ್ಮಾಪಕ ಸಂಘ, ಫಿಲ್ಮ್ ಚೇಂಬರ್ನಿಂದ ಅಳವಡಿಸುವ ಯೋಚನೆ ಮಾಡಿದ್ದೇವೆ ಎಂದು ಹೇಳಿದರು. ನಟ ಪ್ರಕಾಶ್ ರೈ ಮಾತನಾಡಿ, ಈ ಏಕತಾನತೆ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಮೊದಲು ನಾವು ಹೊರಬರಬೇಕು. ಎಲ್ಲ ಚಿತ್ರರಂಗದವರು ಒಟ್ಟಾಗಿ ಹೋರಾಡಬೇಕು. ಒಡೆದು ಆಳುವ ಸಂಸೃತಿಯನ್ನು ಮೀರಿ ನಿಲ್ಲಬೇಕು. ಇವರು ಯಾರೂ ಒಗ್ಗಟ್ಟಾಗುವುದಿಲ್ಲ ಎಂದುಕೊಂಡಿದ್ದವರು ನಾವೆಲ್ಲ ಒಂದಾಗಿರುವುದರಿಂದ ನಮ್ಮ ಬಳಿ ಅವರೇ ಬರುತ್ತಾರೆ ಎನಿಸುತ್ತದೆ ಎಂದು ಹೇಳಿದರು.
ಇನ್ನು ನಿನ್ನೆ ಇದೇ ವಿಚಾರವಾಗಿ ನಡೆದ ಸಂಧಾನಸಭೆ ವಿಫಲವಾಗಿದೆ ಎಂದು ತಿಳಿದುಬಂದಿದ್ದು, ಸಭೆಯ ಬಳಿಕ ಯುಎಫ್ಒ ಜತೆಗಿನ ಮಾತುಕತೆ ಮುರಿದು ಬಿದ್ದಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ. ಬೆಂಗಳೂರಿನ ಫಿಲಂ ಚೇಂಬರ್ನಲ್ಲಿ ಯುಎಫ್ಒ , ಕ್ಯೂಬ್ ಜತೆ ನಡೆದ ಮಹತ್ವದ ಸಭೆಯಲ್ಲಿ ಸಾ.ರಾ.ಗೋವಿಂದು, ಮುನಿರತ್ನ, ನಟ ಪ್ರಕಾಶ್ ರೈ, ರಾಕ್‌ಲೈನ್ ವೆಂಕಟೇಶ್, ತಮಿಳು ನಟ ವಿಶಾಲ್ ಭಾಗಿಯಾಗಿದ್ದರು.