ಶ್ರೀಧರ್ ಚೊಚ್ಚಲ ನಿರ್ದೇಶನದ ಅಪ್ಪ, ಅಮ್ಮ ಪ್ರೀತಿ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿದ್ದು ನಿಜ ಜೀವನದಲ್ಲಿ ಜೋಡಿಯಾಗಿರುವ ಶರತ್ ಕುಮಾರ್ ಮತ್ತು ರಾಧಿಕಾ ಶರತ್ ಕುಮಾರ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಉತ್ತಮ ಕಲಾವಿದರ ಆಯ್ಕೆಯಲ್ಲಿ ತೊಡಗಿರುವ ಚಿತ್ರತಂಡ ಮಲಯಾಳಂ ಚಿತ್ರರಂಗದ ಬೇಡಿಕೆಯ ನಟಿ ಮಾನಸ ರಾಧಾಕೃಷ್ಣನ್ ಅವರನ್ನು ನಾಯಕಿ ಪಾತ್ರದಲ್ಲಿ ಅಭಿನಯಿಸಲು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮಾನಸ ರಾಧಾಕೃಷ್ಣನ್ ಸ್ಯಾಂಡಲ್ ವುಡ್ ಗೆ ಅಪ್ಪ ಅಮ್ಮ ಪ್ರೀತಿ ಚಿತ್ರದ ಮೂಲಕ ಎಂಟ್ರಿ ಕೊಡಲಿದ್ದಾರೆ. ಮಾನಸ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ ಚಿತ್ರತಂಡದ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು ಎನ್ನಲಾಗುತ್ತಿದೆ.
ಕಥೆಯನ್ನು ಇಷ್ಟಪಟ್ಟಿರುವ ಮಾನಸಾ ಕೆಲವು ನಿಯಮಗಳಿಗೆ ಒಪ್ಪಿಕೊಂಡಿದ್ದು ಚಿತ್ರಕ್ಕೆ ಸಹಿ ಮಾಡುವುದು ಬಾಕಿಯಿದೆ. 2008ರಲ್ಲಿ ಬಾಲನಟಿಯಾಗಿ ಸಿನಿಮಾ ವೃತ್ತಿಗೆ ಬಂದ ಮಾನಸಾ ಈಗಾಗಲೇ 9 ಚಿತ್ರಗಳಲ್ಲಿ ನಟಿಸಿದ್ದಾರೆ.
ಇದೇ ನಮ್ಮ ಪ್ರಪಂಚ ಎಂಬ ಟ್ಯಾಗ್ ಲೈನ್ ನೊಂದಿಗೆ ತಯಾರಾಗುತ್ತಿರುವ ಅಪ್ಪ ಅಮ್ಮ ಪ್ರೀತಿ ಚಿತ್ರ ವಿನಯ್ ರಾಜ್ ಕುಮಾರ್ ಗೆ ವಿಭಿನ್ನ ಪಾತ್ರ ನೀಡಲಿದೆ. ಜುಡಾ ಸ್ಯಾಂಡಿಯವರ ಸಂಗೀತ ಚಿತ್ರಕ್ಕಿದೆ. ಎನ್ಎಲ್ಎನ್ ಮೂರ್ತಿಯವರು ಈ ಚಿತ್ರ ನಿರ್ಮಿಸಲಿದ್ದಾರೆ.
ಪ್ರಸ್ತುತ ವಿನಯ್ ರಾಜ್ ಕುಮಾರ್ ಅನಂತ್ ವಿ/ಎಸ್ ನುಸ್ರತ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನು ಸುದೀರ್ ಶಾನುಭೋಗ್ ನಿರ್ದೇಶಿಸುತ್ತಿದ್ದಾರೆ.