ಹನುಮಂತಪ್ಪ ಕೊಪ್ಪದ್-ಅಲ್ಲು ಅರ್ಜುನ್
ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ನಾ ಪೇರು ಸೂರ್ಯ ಚಿತ್ರದಲ್ಲಿ ವೀರ ಕನ್ನಡಿಗ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಕುರಿತು ಪ್ರಸ್ತಾಪಿಸಲಾಗಿದೆ.
ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಆರು ದಿನಗಳ ಕಾಲ ಪವಾಡ ಸದೃಶವಾಗಿ ಬದುಕುಳಿದಿದ್ದ, ಮನೋಸ್ಥೈರ್ಯಕ್ಕೆ ಅತ್ಯುನ್ನತ ಮಾದರಿಯಾಗಿದ್ದ ಹನುಮಂತಪ್ಪ ಕೊಪ್ಪದ್ ಅವರಂತೆ ನಾನು ಬದುಕಬೇಕು ಎಂದು ಅಲ್ಲು ಅರ್ಜುನ್ ಅವರು ಪ್ರಸ್ತಾಪಿಸಿದ್ದಾರೆ.
ನಾ ಪೇರು ಸೂರ್ಯ ಚಿತ್ರದಲ್ಲಿ ಅಲ್ಲು ಅರ್ಜುನ್ ಸೈನಿಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಿಎಸ್ಎಫ್ ನಲ್ಲಿ ಕೆಲಸ ಮಾಡಿಕೊಂಡು ಬಾರ್ಡರ್ ಗೆ ಹೋಗಿ ಶತ್ರುಗಳ ಜತೆ ಹೋರಾಡಬೇಕು ಎಂಬ ಆಸೆ ಈ ಚಿತ್ರದ ನಾಯಕನಿಗೆ ಇರುತ್ತದೆ.
ಬಾರ್ಡರ್ ಗೆ ಹೋಗುವುದೇ ನನ್ನ ಗುರಿ ಎಂದು ಅಲ್ಲು ಅರ್ಜುನ್ ತನ್ನ ಗಾಡ್ ಫಾದರ್ ಗೆ ಹೇಳುತ್ತಾನೆ. ಯಾಕೆ ಅಲ್ಲಿಗೆ ಹೋಗಬೇಕು ಎಂದು ಕೇಳಿದಾಗ ಅಲ್ಲು ಅರ್ಜುನ್ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಬಗ್ಗೆ ಮಾತನಾಡುತ್ತಾರೆ.
ಹನುಮಂತಪ್ಪ ನಮಗೆಲ್ಲ ಮಾದರಿ, ಅಷ್ಟು ದಿನಗಳ ಕಾಲ ಕೊರೆಯುವ ಚಳಿಯಲ್ಲಿ ಬದುಕಿದ್ದರು. ಅವರ ಜಾಗದಲ್ಲಿ ನಾನು ಇರಬೇಕಿತ್ತು ಎಂದು ನನಗೆ ಆಗಾಗ ಅನಿಸುತ್ತದೆ. ಹನಮಂತಪ್ಪ ಸಲಾಮ್ ಎಂದು ನಾಯಕ ಅಲ್ಲು ಅರ್ಜುನ್ ಹೇಳುತ್ತಾರೆ. ಈ ಮೂಲಕ ಸೈನ್ಯದ ಕಥೆ ಹೇಳಿರುವ ನಿರ್ದೇಶಕ ವಕ್ಕಾಂತಮ್ ವಂಶಿ ಕನ್ನಡಿಗ ಹನುಮಂತಪ್ಪಗೆ ಗೌರವ ಸಲ್ಲಿಸಿದ್ದಾರೆ.